ಕರ್ನಾಟಕದ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಅಲ್ಲಲ್ಲಿ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಲೇ ಇದೆ. ಕೊಡಗು ಜಿಲ್ಲೆಯಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ರಸ್ತೆ ಬದಿ ಕುಸಿಯುವ ಭೀತಿ ಎದುರಾಗಿದೆ.
ಮುಂದಿನ ನಾಲ್ಕು ದಿನಗಳ ಕಾಲ ಅತೀ ಹೆಚ್ಚು ಮಳೆಯಾಗುವ ಎಲ್ಲಾ ಸಾಧ್ಯತೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ
ರಾಷ್ಟ್ರೀಯ ಹೆದ್ದಾರಿ -275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕೀ.ಮೀ 90.05 ರಿಂದ 90.10ರ ಕರ್ತೋಜಿ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯ ಬಲ ಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ದಿನಾಂಕ 18.07.2024 ರಿಂದ 22.07.2024 ರವರೆಗೆ ಪ್ರತಿದಿನ ರಾತ್ರಿ 8.00 ಗಂಟೆಯಿಂದ ಮರುದಿನ ಬೆಳಿಗ್ಗೆ 6.00 ಗಂಟೆಯವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಉಲ್ಲೇಖ ಪತ್ರದಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ, ಮಡಿಕೇರಿ ಇವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು-ಕಫಕ್ಕೆ ಸರಳವಾದ ಮನೆ ಮದ್ದು
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ನೀಡಿರುವ ವರದಿಯಂತೆ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಅತೀ ಹೆಚ್ಚು ಮಳೆಯಾಗುವ ಎಲ್ಲಾ ಸಾಧ್ಯತೆಗಳಿರುತ್ತದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸಾರ್ವಜನಿಕ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ-275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜಿ ಎಂಬ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯ ನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ರೀತಿಯ ವಾಹನ ಸಂಚಾರವನ್ನು 18.07.2024 ರಿಂದ 22.07.2024ರವರೆಗೆ ಸ್ಥಗಿತಗೊಳಿಸಿ. ಆದೇಶ ಸಂಖ್ಯೆ: ಎಮ್ಎಜಿ/125/2024-25 ಮೂಲಕ ವೆಂಕಟ್ ರಾಜ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಕೊಡುಗು ಜಿಲ್ಲೆ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ, ಕೊಡಗು, ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಅಲ್ಲಲ್ಲಿ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗುತ್ತಿದೆ. ನಿರಂತರ ಸುರಿಯುತ್ತಿರುವ ಈ ಮಳೆ ಜನರನ್ನು ಮನೆಯಿಂದ ಹೊರ ಹೋಗದಂತೆ ಮಾಡುತ್ತಿದೆ. ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದ್ದರೂ ಗಿರಾಕಿಗಳಿಲ್ಲದೆ ವ್ಯಾಪಾರಸ್ಥರು ಕಂಗಾಲಾಗುತ್ತಿದ್ದಾರೆ.
ವ್ಯಾಪಕ ಮಳೆಗೆ ದಕ್ಷಿಣ ಕನ್ನಡ, ಕೊಡಗು, ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ತಾಲ್ಲೂಕುಗಳಾದ ಪುತ್ತೂರು, ಕಡಬ, ಬೆಳ್ತಂಗಡಿ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳ ಎಲ್ಲಾ ಅಂಗನವಾಡಿ, ಸರ್ಕಾರಿ- ಅನುದಾನಿತ- ಖಾಸಗಿ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಕರು ಆನ್ಲೈನ್ ಮೂಲಕ ತರಗತಿ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ
ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮುದ್ರ, ನದಿ ಸರೋವರಗಳಿಗೆ ಸಾರ್ವಜನಿಕರು ತೆರಳದಂತೆ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶ, ವಿದ್ಯುತ್ ಕಂಬಗಳನ್ನು ಮುಟ್ಟದಂತೆ ಸೂಚನೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.