ಸಹಕಾರ ರಂಗ ಇಂದು ವಿಶ್ವ ವ್ಯಾಪ್ತಿಯಾಗಿ ತನ್ನ ಕಾರ್ಯ ವೈಖರಿಯನ್ನು ಹರಡಿಕೊಂಡಿದೆ. ಸಹಕಾರದ ಇಂಚಿಂಚು ಬೆಳವಣಿಗೆಯ ಆರಂಭವೇ ಗ್ರಾಮ ಪ್ರದೇಶಗಳು. ಆಯಾಯ ಪ್ರದೇಶಗಳಲ್ಲಿ ಒಬ್ಬೊಬ್ಬರು ತಮ್ಮ ಬದುಕನ್ನೇ ಸಹಕಾರ ವೃದ್ಧಿಗಾಗಿ ಮುಡಿಪಾಗಿಟ್ಟಿದ್ದು, ಇಂದು ಕೀರ್ತಿಶೇಷರಾಗಿ ಗೌರವಿಸಲ್ಪಡುವವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಧುರೀಣ ಮೊಳಹಳ್ಳಿ ಶಿವರಾವ್ ಅವರು ಅಗ್ರಗಣ್ಯರು.
ಮೊಳಹಳ್ಳಿ ಶಿವರಾವ್ ಅವರು 1880ರ ಆಗಸ್ಟ್ 4ರಂದು ರಂಗಪ್ಪಯ್ಯ ಹಾಗೂ ಮೂಕಾಂಬಿಕಾ ದಂಪತಿ ಮಗನಾಗಿ ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಇವರ ಜನ್ಮಸ್ಥಳ. ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘಟನಾ ಚಾತುರ್ಯ ಗುಣ ಹೊಂದಿದ್ದ ಶಿವರಾವ್ ಭವಿಷ್ಯದಲ್ಲಿ ಕರಾವಳಿ ಭಾಗದಲ್ಲಿ ಸಹಕಾರ ಸಂಘದ ನಿರ್ಮಾಣಕ್ಕೆ ಮುನ್ನುಡಿ ಬರೆದರು.
ಸಹಕಾರಿ ಚಳುವಳಿಯ ಹರಿಕಾರರಾಗಿ ಶಿವರಾವ್ ಅವರು ಇಟ್ಟ ಹೆಜ್ಜೆ ಸಹಕಾರ ಕ್ಷೇತ್ರದಲ್ಲಿ ಸಫಲವಾಗಿ ಸಾವಿರಾರು ಜನರ ಬದುಕಿಗೆ ಬೆಳಕಾಗಿದೆ. ಸಹಕಾರ ರಂಗದ ಪಿತಾಮಹರಾಗಿ, ಸೇವಾ ಧುರೀಣರಾಗಿ ದಕ್ಷಿಣ ಭಾರತದಲ್ಲಿಯೇ ಇವರು ಸುಪ್ರಸಿದ್ಧರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಹಕಾರ ರಂಗದ ಬೆಳವಣಿಗೆಗೆ ಅನಿಯಮಿತವಾಗಿ ದುಡಿದ ಶಿವರಾವ್ ತನ್ನ ಸರ್ವಸ್ವವನ್ನೂ ಈ ಕ್ಷೇತ್ರಕ್ಕೆ ಸಮರ್ಪಿಸಿದವರು. ಸಮಾಜ ಸೇವೆಯನ್ನೇ ತನ್ನ ಬದುಕಿನ ಉಸಿರನ್ನಾಗಿಸಿಕೊಂಡು ಜನಸೇವೆಗಾಗಿ ದುಡಿದವರಿವರು. ಬಹುಶಃ ಇಂದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಚಳುವಳಿ ಬಹು ಆಳವಾಗಿ ಬೇರೂರಿ ಸಹಕಾರ ರಂಗ ಆಲದ ಮರದಂತೆ ಹೆಮ್ಮರವಾಗಿ ಬೆಳೆದು ನಿಂತಿದೆಯೆಂದರೆ ಅದಕ್ಕೆ ಕಾರಣ ಶಿವರಾವ್ ಅವರ ಪವಾಡ ಸದೃಶ ಕಾರ್ಯ ವೈಖರಿ ಹಾಗೂ ಕಠಿಣ ಪರಿಶ್ರಮ. ಮುಂದೆ ಸಹಕಾರ ಕ್ಷೇತ್ರದ ಜತೆಗೆ ಅನೇಕ ವಿದ್ಯಾಸಂಸ್ಥೆಗಳ ಸ್ಥಾಪನೆಗೆ ಕಾರಣಕರ್ತರಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರೆನಿಸಿಕೊಂಡರು.
ವೃತ್ತಿಯಲ್ಲಿ ನ್ಯಾಯಾಧೀಶರಾಗಿದ್ದ ಮೊಳಹಳ್ಳಿ ಶಿವರಾವ್ ಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ತನ್ನ ವೃತ್ತಿ ಬದುಕನ್ನೇ ಮರೆತು ಮುನ್ನುಗ್ಗಿದವರು. ಅವರಲ್ಲಿದ್ದ ಅಗಾಧ ಪ್ರತಿಭೆ, ವಿಶಿಷ್ಟವಾದ ಪಾಂಡಿತ್ಯ, ಸಂಘಟನಾ ಪ್ರಾವಿಣ್ಯತೆ, ಆಡಳಿತ ಕೌಶಲ್ಯ, ಪರೋಪಕಾರಿ ಗುಣ, ಪ್ರಗತಿಪರ ಮನೋಭಾವ, ಜನಸೇವೆ, ಕರ್ತವ್ಯ ನಿಷ್ಠೆ ಅಲ್ಲದೆ ಸಹಕಾರ ತತ್ವದಲ್ಲಿ ಅವರು ಇಟ್ಟಿದ್ದ ಅಚಲ ನಂಬಿಕೆ ಅವರನ್ನು ಸಹಕಾರ ಕ್ಷೇತ್ರದಲ್ಲಿ ಧೀಮಂತ ನಾಯಕನನ್ನಾಗಿಸಿತು.
1904 ಮಾರ್ಚ್ 23ರಂದು ಭಾರತದಲ್ಲಿ ಸಹಕಾರ ಆಂದೋಲನವು ಕಾಯ್ದೆ ರೂಪದಲ್ಲಿ ಜಾರಿಗೆ ಬಂತು. ಆ ಸಂದರ್ಭದಲ್ಲಿ ಅದರ ಪ್ರಭಾವ ದಕ್ಷಿಣ ಕನ್ನಡ ಜಿಲ್ಲೆಗೂ ವ್ಯಾಪಿಸಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಆಂದೋಲನದ ಅನುಷ್ಠಾನ ಕುರಿತು ಕಾರ್ಯ ಪ್ರವೃತ್ತರಾದ ಶಿವರಾವ್ ಸಹಕಾರ ಸಂಘಗಳ ಸಂಘಟನೆಗೆ ಮುಂದಾದರು. ತನ್ನ ಹುಟ್ಟೂರಾದ ಪುತ್ತೂರಿನಲ್ಲಿ ಮೊತ್ತ ಮೊದಲಿಗೆ 1909ರಲ್ಲಿ ಸಹಕಾರಿ ಕ್ರೆಡಿಟ್ ಸೊಸೈಟಿಯನ್ನು ಸಂಸ್ಥಾಪಿಸಿದರು. ಸಹಕಾರ ಚಳುವಳಿಯನ್ನು ಮತ್ತಷ್ಟು ವಿಶ್ವವ್ಯಾಪಿಗೊಳಿಸುವ ನಿಟ್ಟಿನಲ್ಲಿ ಪ್ರತೀ ಹಳ್ಳಿ ಹಳ್ಳಿಯ ಗಲ್ಲಿಗಳಿಗೂ ತೆರಳಿ ಸಹಕಾರ ತತ್ವಗಳ ಮಹತ್ವವನ್ನು ವಿವರಿಸುತ್ತಾ ಸಹಕಾರಿ ಸಂಘಗಳ ಸ್ಥಾಪನೆಗೆ ಕಾರಣರಾದರು.
1914ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸಿದರು.
ದಕ್ಷಿಣ ಕನ್ನಡದ ಮಣ್ಣಲ್ಲಿ ತಲೆಯೆತ್ತಿದ್ದ ಸಹಕಾರ ಸಂಘಗಳಿಗೆ ಆರ್ಥಿಕ ಬೆಂಬಲ ನೀಡಲು ಒಂದು ಮಾತೃ ಸಂಸ್ಥೆಯ ಅವಶ್ಯಕತೆ ಅತೀ ಅಗತ್ಯವಾಗಿತ್ತು. ಇದನ್ನು ಮನಗಂಡ ಶಿವರಾವ್ 1914ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸಿದರು. ನಂತರ ಜನರ ಅನುಕೂಲಕ್ಕೆ ಅನುಗುಣವಾಗಿ ಈ ಬ್ಯಾಂಕ್ ಕಚೇರಿಯನ್ನು 1925ರಲ್ಲಿ ಮಂಗಳೂರಿಗೆ ಸ್ಥಳಾಂತರಿಸಲಾಯಿತು. ಮೊಳಹಳ್ಳಿ ಶಿವರಾವ್ ಅವರು ಸ್ಥಾಪಿಸಿದ ಈ ಜಿಲ್ಲಾ ಸಹಕಾರ ಸಂಘ 110 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಸಹಕಾರ ಬ್ಯಾಂಕ್ ಕ್ಷೇತ್ರದಲ್ಲಿ ಶಿವರಾವ್ ಅವರ ಕೊಡುಗೆ ಹಾಗೂ ಸಾಧನೆ ಅಪ್ರತಿಮವಾದುದು.
ಸಹಕಾರ ತತ್ವಗಳನ್ನು ನಾವು ಅನುಸರಿಸಿಕೊಂಡು ಸಹಕಾರ ರಂಗದಲ್ಲಿ ಸಹಕಾರಿಗಳಾಗಿ ಬಾಳಿ ಬದುಕೋಣ.
ಸುದೀರ್ಘ 87 ವರ್ಷಗಳ ತಮ್ಮ ಬಾಳ ಪಯಣದಲ್ಲಿ 58 ವರ್ಷಗಳ ತಮ್ಮ ಆಯಸ್ಸನ್ನು ಸಹಕಾರ ರಂಗದ ಸೇವೆಗಾಗಿ ಮುಡಿಪಾಗಿಟ್ಟವರು ಶಿವರಾವ್. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಅವರು ನೀಡಿದ ಧೀಮಂತ ಕೊಡುಗೆ ಇಂದಿಗೂ ಎಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಪಿತಾಮಹ ಎಂದು ಕರೆಯಲ್ಪಡುವ ಇವರ ಸೇವೆ ಎಂದೆಂದಿಗೂ ಅಜರಾಮರ. ಪ್ರತೀ ಸಹಕಾರ ಸಂಘಗಳ ಕಚೇರಿಯಲ್ಲೂ ಕಾಣಸಿಗುವ ಇವರ ಭಾವಚಿತ್ರ ಸಹಕಾರ ತತ್ವಗಳನ್ನು ಸಾರಿ ಸಾರಿ ಹೇಳುತ್ತದೆ. ಸಹಕಾರ ಜೀವಿಯಾಗಿ ಬದುಕಿದ ಮೊಳಹಳ್ಳಿ ಶಿವರಾವ್ ಅವರು 1967 ಜುಲೈ 4ರಂದು ಇಹಲೋಕ ತ್ಯಜಿಸಿ ಸಹಕಾರ ರಂಗದಲ್ಲಿ ಅಸಾಮಾನ್ಯ ನೆನಪಾಗಿ ಉಳಿದರು. ಇವರು ಪಾಲಿಸಿದ ಸಹಕಾರ ತತ್ವಗಳನ್ನು ನಾವು ಅನುಸರಿಸಿಕೊಂಡು ಸಹಕಾರ ರಂಗದಲ್ಲಿ ಸಹಕಾರಿಗಳಾಗಿ ಬಾಳಿ ಬದುಕೋಣ.