ಮಳೆಗಾಲ ದ ವರ್ಷಧಾರೆ ಭುವಿಯನ್ನು ಚುಂಬಿಸುವ ದಿನಕ್ಕಾಗಿ ಮನಸ್ಸು ಅದೆಷ್ಟು ಹಾತೊರೆಯುತ್ತಿರುತ್ತೆ ಅಲ್ವಾ..? ಬಿಸಿಲ ಬೇಗೆಗೆ ಬೆಂದ ಧರೆಯೂ ಹನಿ ನೀರ ಸ್ಪರ್ಶಕ್ಕಾಗಿ ಕಾಯುತ್ತಿರುತ್ತದೆ. ಬೇಸಿಗೆಯ ತುಂಬಾ ಮಳೆಗಾಗಿ ಪ್ರಾರ್ಥನೆ ಮಾಡಿ ಕೊನೆಗೆ ಮಳೆ ನಿಲ್ಲಲೂ ದೇವರನ್ನು ಪ್ರಾರ್ಥಿಸುವವರೇ ಹೆಚ್ಚು.
ವಾಡಿಕೆಯಂತೆ ಮುಂಗಾರು ಜೂನ್ ಮೊದಲ ವಾರದಲ್ಲಿ ಆರಂಭವಾಗಬೇಕಿತ್ತು. ಆದರೆ ಪ್ರಕೃತಿ ನಿಯಮ ಅಲ್ಲೋಲ ಕಲ್ಲೋಲವಾಗಿ ಜೂನ್ ತಿಂಗಳ ಕೊನೆಯಲ್ಲಿ ಅಲ್ಪ ಸ್ವಲ್ಪ ಮಳೆ ಆರಂಭವಾಯಿತು. ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ಅಲ್ಲಲ್ಲಿ ಭೂ ಕುಸಿತ, ನೆರೆ, ಮೀರಿ ಬೀಳುವುದು, ಮನೆಗಳಿಗೆ ಹಾನಿ ಹೀಗೇ ಅವಾಂತರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಈ ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಮಾತ್ರ ಕಡಿವಾಣ ಹಾಕಲು ಸಾಧ್ಯವಿಲ್ಲ. ಅತ್ತಿಂದಿತ್ತ ಜನರು ವಾಹನಗಳಲ್ಲಿ ಪ್ರಯಾಣಿಸುತ್ತಲೇ ಇರುತ್ತಾರೆ. ಈ ವಾಹನ ಸವಾರರು ಮಳೆಗಾಲದಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲೇಬೇಕು.
ಇದನ್ನೂ ಓದಿ: ತುರ್ತಾಗಿ ಮಂಗಳೂರು-ಬೆಂಗಳೂರು ವಿಶೇಷ ರೈಲು ಸೇವೆ ಆರಂಭ | ಇಲ್ಲಿದೆ ವೇಳಾಪಟ್ಟಿ..
ಮಳೆಗಾಲ ದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
- ಮಳೆಗಾಲದಲ್ಲಿ ಸಂಚರಿಸುವ ಬೈಕ್ ಸವಾರರು ಕಡ್ಡಾಯವಾಗಿ ಶಿರಸ್ತ್ರಾಣ(ಹೆಲ್ಮೆಟ್) ಧರಿಸಿಯೇ ಸಂಚರಿಸಬೇಕು. ಕೆಲಸಕ್ಕಾಗಿ ಎಷ್ಟೋ ದೂರ ಪ್ರಯಾಣ ಮಾಡುವಾಗ ಈ ನಿಯಮವನ್ನು ಪಾಲಿಸಿದರೆ ದೊಡ್ಡದಾಗಿ ಸಂಭವಿಸುವ ಅಪಾಯವನ್ನು ಸಣ್ಣದಾಗಿ ತಪ್ಪಿಸಬಹುದು.
- ಮಳೆಗಾಲದಲ್ಲಿ ಗಾಳಿಗೆ ಅಲ್ಲಲ್ಲಿ ಮರಗಳು ವಿದ್ಯುತ್ ಕಂಬ ಅಥವಾ ತಂತಿಗಳ ಮೇಲೆ ಬಿದ್ದು ವಿದ್ಯುತ್ ತಂತಿಗಳಗಳು ರಸ್ತೆ ಮೇಲೆ ಬಿದ್ದಿರುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರವಹಿಸುವ ವಿದ್ಯುತ್ ಪ್ರಾಣವನ್ನೇ ಬಲಿ ಪಡೆಯುತ್ತದೆ. ಆದ್ದರಿಂದ ವಾಹನಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು.
- ಮಳೆಗಾಲದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೆ ಹಲವು ಕಡೆ ರಸ್ತೆಯ ಮೇಲೆ ನೀರು ನಿಂತಿರುತ್ತದೆ. ಅಲ್ಲದೆ ರಸ್ತೆ ದುರಸ್ತಿಯಾಗುತ್ತಿರುವ ಜಾಗಗಳಲ್ಲಿ ಗುಂಡಿಗಳಿದ್ದರೂ ನೀರು ನಿಂತಿರುವುದರಿಂದ ಗೋಚರಿಸುವುದಿಲ್ಲ. ಆದ್ದರಿಂದ ಆದಷ್ಟು ನಿಧಾನವಾಗಿ ಸಂಚರಿಸಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಿಕೊಳ್ಳಿ.
- ಮಳೆಗಾಲದಲ್ಲಿ ರಸ್ತೆ ಬದಿಯ ಗುಡ್ಡಗಳು ಕುಸಿದು ಬೀಳುವುದು ಈಗ ಸಾಮಾನ್ಯ ಸಮಸ್ಯೆಯಂತಾಗಿದೆ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಅದೆಷ್ಟು ಜೀವಗಳು ಮಣ್ಣು ಪಾಲಾಗುವುದೋ ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ ಇಂತಹ ಅಪಾಯಕಾರಿ ಜಾಗಗಳಲ್ಲಿ ವಾಹನ ಸಂಚಾರ ಅಥವಾ ವಾಹನ ನಿಲ್ಲಿಸಲು ಹೋಗಬೇಡಿ.
- ಕೆಲವೊಂದು ವಾಹನಗಳಿಂದ ಆಯಿಲ್ ಸೋರಿಕೆಯಾಗಿ ಮಳೆಗಾಲದಲ್ಲಿ ರಸ್ತೆ ಪೂರ್ತಿ ಹರಡಿರುತ್ತದೆ. ಇದು ವೇಗವಾಗಿ ಬರುವ ವಾಹನಗಳನ್ನು ನಿಯಂತ್ರಣ ತಪ್ಪುವಂತೆ ಮಾಡಿ ಅನಾಹುತಕ್ಕೆ ಕಾರಣವಾಗುತ್ತದೆ. ಆದ್ದರಿಂದ ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಹೋಗಬೇಡಿ.
- ವೇಗವಾದ ವಾಹನ ಚಲಾವಣೆ ಬೇಡ. ಅವಸರವು ಅಪಘಾತಕ್ಕೆ ಕಾರಣವಾಗುತ್ತದೆ.
- ಮಳೆಗಾಲದ ರಾತ್ರಿ ಹೊತ್ತು ನಿದ್ದೆಗಣ್ಣಿನಿಂದ ವಾಹನ ಚಲಾಯಿಸುವ ಸಾಹಸಕ್ಕೆ ಕೈ ಹಾಕಲೇಬೇಡಿ. ಆಯಾ ತಪ್ಪಿದರೆ ಯಮಲೋಕ ದರ್ಶನ ಖಚಿತ.
- ಮಳೆ ಬರುತ್ತಿರುವಾಗ ವಾಹನದ ಗಾಜಿನ ತುಂಬಾ ನೀರು ಬೀಳುತ್ತಿರುತ್ತದೆ. ಇದರಿಂದಾಗಿ ಎದುರುಗಡೆ ಮಾರ್ಗ ಅಥವಾ ಬರುವ ವಾಹನಗಳು ಏನೂ ಕಾಣಿಸುವುದಿಲ್ಲ. ಆದಷ್ಟು ಎಲ್ಲವನ್ನೂ ಗಮನಿಸುತ್ತಾ ವಾಹನವನ್ನು ಚಲಾಯಿಸುವುದು ಉತ್ತಮ.
- ಮಳೆಗಾಲದಲ್ಲಿ ಮಕ್ಕಳು, ಪಾದಚಾರಿಗಳು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಇವರ ಮೇಲೆ ಕೆಸರು ನೀರನ್ನು ಹಾಯಿಸಿ ಕೊಂಡು ಹೋಗಬೇಡಿ.
ಇದನ್ನೂ ಓದಿ: ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಅಂಟಿಸಲು ಇನ್ನೂ ಮುಂದೆ ಹೊಸ ನಿಯಮ
ವಾಹನ ಸವಾರರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲದು. ಅಪ್ಪಿ ತಪ್ಪಿ ಅಪಾಯ ಎದುರಾಗಿ ಪ್ರಾಣಕ್ಕೆ ಸಂಚಕಾರ ಬಂದರೆ ಅವಲಂಬಿತ ಹೆತ್ತವರು, ಹೆಂಡತಿ ಮಕ್ಕಳ ಬದುಕು ಕೂಡ ಬೀದಿಗೆ ಬಂದು ಬೀಳಬಹುದು. ಆದ್ದರಿಂದ ವಾಹನಗಳನ್ನು ಚಲಾಯಿಸುವಾಗ ತಮಾಷೆ ಬೇಡ. ನಿಮ್ಮ ಭವಿಷ್ಯದೊಂದಿಗೆ ಹಿಂದೆ ಮುಂದೆ ಚಲಿಸುವ ಇತರ ಸವಾರರ ಬದುಕೂ ಕೂಡ ತುಂಬಾ ಮುಖ್ಯವಾಗಿರುತ್ತದೆ. ಎಲ್ಲರೂ ಕಡ್ಡಾಯವಾಗಿ ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸೋಣ.