ರಾಷ್ಟ್ರೀಯ ಶ್ವಾನ ದಿನದ ಮಹತ್ವ ಮತ್ತು ಶ್ವಾನಗಳ ರಕ್ಷಣೆಯ ಅವಶ್ಯಕತೆ
ಪ್ರಾಣಿ ಪಕ್ಷಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ..? ಒಬ್ಬೊಬ್ಬರು ಒಂದೊಂದು ಬಗೆಯ ಪ್ರಾಣಿ ಅಥವಾ ಪಕ್ಷಿಗಳನ್ನು ಮನಸಾರೆ ಪ್ರೀತಿಸಿ ಸಾಕುತ್ತಿರುತ್ತಾರೆ. ಅದರಲ್ಲೂ ಮನೆಯ ರಕ್ಷಣೆಗಾಗಿ ಹೆಚ್ಚಿನವರು ನಾಯಿಯನ್ನು ಸಾಕುತ್ತಾರೆ. ನಾಯಿ ಮತ್ತು ಮನುಷ್ಯನ ನಡುವೆ ಇರುವಂತಹ ಅವಿನಾಭಾವ ಸಂಬಂಧಕ್ಕೆ ಸರಿಸಾಟಿ ಬೇರೇನೂ ಇರದು. ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ಧರ ತನಕ ಎಲ್ಲರೂ ನಾಯಿಯನ್ನು ಅಕ್ಕರೆಯಿಂದ ಸಲಹುತ್ತಾರೆ. ನಾಯಿಯು ಮನೆಯ ಸದಸ್ಯನಷ್ಟೇ ಅಲ್ಲದೆ ಕುಟುಂಬದ ಅವಿಭಾಜ್ಯ ಅಂಗವೂ ಆಗಿದೆ.
ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಂದಕ್ಕೂ ಒಂದೊಂದು ದಿನವಿದೆ. ಹಾಗೆಯೇ ಆಗಸ್ಟ್ 26ನ್ನು “ರಾಷ್ಟ್ರೀಯ ಶ್ವಾನ ದಿನ” ವನ್ನಾಗಿ ಆಚರಿಸಲಾಗುತ್ತದೆ. ಮನೆಗೆ ಪಾಲೆಗಾರನಾಗುವುದರಿಂದ ಹಿಡಿದು ದೇಶ ರಕ್ಷಣೆಯವರೆಗೂ ಶ್ವಾನಗಳು ಇಂದು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.ಆದ್ದರಿಂದ ಶ್ವಾನಗಳ ವಿವಿಧ ತಳಿಗಳನ್ನು ಉಳಿಸಿ ಬೆಳೆಸುವಂತಹ ಮಹತ್ತರ ಜವಾಬ್ದಾರಿಗಾಗಿ ಶ್ವಾನ ದಿನವನ್ನು ಆಚರಿಸಲಾಗುತ್ತದೆ.
ಭಾರತದಾದ್ಯಂತ ಶ್ವಾಸವನ್ನು ಪತ್ತೆದಾರಿ ಕೆಲಸಗಳಿಗೆ ಪೋಲಿಸ್ ಇಲಾಖೆ ಬಳಸುತ್ತಿದೆ. ಈ ತರಬೇತಿ ನಿರತ ವಿಶೇಷ ತಳಿಯ ಶ್ವಾನಗಳು ಎಷ್ಟೋ ಅಪರಾಧಿಗಳ ಪತ್ತೆಗೆ ಸಹಾಯ ಮಾಡುತ್ತಿವೆ. ಅಷ್ಟೇ ಅಲ್ಲದೆ ದೇಶದ ಸೇನೆಯೂ ಶ್ವಾನಗಳನ್ನು ಯೋಧನಂತೆ ದೇಶ ರಕ್ಷಣೆಗೆ ಬಳಸುತ್ತಿದೆ. ಮೊನ್ನೆಯಷ್ಟೇ ಪ್ಯಾರಿಸ್ ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದ ವಿಶೇಷ ಭದ್ರತೆಗಾಗಿ ನಮ್ಮ ಭಾರತೀಯ ಶ್ವಾನದಳವನ್ನು ಕಳುಹಿಸಿ ಕೊಡುವಂತೆ ಭಾರತ ಸರ್ಕಾರಕ್ಕೆ ವಿನಂತಿಸಿತ್ತು.
ಭಾರತದ ಶ್ವಾನಗಳಿಗೆ ದೇಶ ವಿದೇಶಗಳಲ್ಲಿ ಇಂದು ಮನ್ನಣೆ ಸಿಗುತ್ತಿದೆ. ಇದು ಸಂತಸದ ವಿಷಯ.ಆದರೆ ಸಾಮಾನ್ಯ ಊರ ನಾಯಿ ಅಥವಾ ಬೀದಿ ನಾಯಿಗಳ ಪಾಡು ಮಾತ್ರ ಹೇಳತೀರದಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೇವಲ ಗಂಡು ನಾಯಿಗಳನ್ನು ಮಾತ್ರ ಸಾಕಲು ಇಷ್ಟ ಪಡುತ್ತಿದ್ದಾರೆ. ಹೆಣ್ಣು ನಾಯಿ ಮರಿ ಇಟ್ಟರೆ ಹೆಣ್ಣು ಮರಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವವರೇ ಹೆಚ್ಚು.
ಸ್ನೇಹಿತರೇ.. ನಮ್ಮ ಸಮಾಜದ ಈ ತಾರತಮ್ಯ ನೀತಿಗೆ ಕೊನೆಯಿಲ್ಲವೇ..? ಯಾವುದೇ ಹೆಣ್ಣು ಜೀವಿಯಾದರೂ ತಾಯಿಯಾಗುವ ಸೌಭಾಗ್ಯದ ಕ್ಷಣಕ್ಕಾಗಿ ಕಾಯುತ್ತಿರುತ್ತದೆ. ಹೆಣ್ಣು ನಾಯಿಯೂ ಅದರ ಹೊರತಾಗಿಲ್ಲ. ಹೆಣ್ಣು ನಾಯಿ ಹೆಣ್ಣು ನಮರಿಗಳಿಗೆ ಜನ್ಮ ನೀಡುವುದು ತಪ್ಪೇ.? ಖಂಡಿತಾ ತಪ್ಪಲ್ಲ. ಆದರೆ ಆ ಮರಿಗಳನ್ನು ತೆಗೆದುಕೊಂಡು ಹೋಗಿ ಬೀದಿ ಬದಿಯಲ್ಲಿ ಬಿಡುವುದು, ಕಣ್ಣು ಬಿಡದಿರುವ ಮರಿಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಎಲ್ಲೆಂದರಲ್ಲಿ ಎಸೆಯುವುದು ಮಹಾಪಾಪ ಹಾಗೂ ಮಹಾಪರಾಧ.
ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಈ ಹಕ್ಕನ್ನು ಮೊಟಕುಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಅದರಲ್ಲೂ ನಾಯಿಯಂತಹ ಮೂಕ ಪ್ರಾಣಿಗಳ ಬದುಕನ್ನು ಬೀದಿ ಪಾಲು ಮಾಡಿದರೆ ಅವುಗಳ ರೋಧನೆಯನ್ನು ಕೇಳುವವರಾರು.? ಹೊಟ್ಟೆಗೆ ಅನ್ನ ನೀರಿಲ್ಲ. ಹಸಿವ ನೀಗಿಸುವ ತಾಯಿ ಎದೆಹಾಲಿಲ್ಲ, ಇನ್ನೂ ಸಣ್ಣ ನಾಯಿ ಮರಿಗಳನ್ನು ಬೀದಿ ಬದಿ ಬಿಟ್ಟರೆ ಅವುಗಳಿಗೆ ತಾಯಿಯ ಬಿಸಿಯಪ್ಪುಗೆಯಿಲ್ಲದೆ ಗಾಳಿ-ಮಳೆ-ಚಳಿಯಲ್ಲಿ ವಿಲವಿಲನೆ ಒದ್ದಾಡಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬರುತ್ತದೆ. ಕೆಲವೊಬ್ಬರ ಹೀನ
ಮನಸ್ಥಿತಿಯಿಂದ ನಾಯಿ ಮರಿಗಳು ಚೀಲದೊಳಗೆ ಉಸಿರುಗಟ್ಟಿ ಸಾಯುತ್ತವೆ. ಇನ್ನೂ ಹಲವೆಡೆ ನಾಯಿ ಮರಿಗಳು ಕಸದ ತೊಟ್ಟಿಯೊಳಗೆ ನರಳಾಡುವ ಪರಿಸ್ಥಿತಿ ..!! ದುಷ್ಟ ಮಾನವನ ವಿಕೃತ ಮನಸ್ಥಿತಿಗೆ ಎನೆಯೇ ಇಲ್ಲವೇನೋ ಎಂದೆನಿಸುತ್ತದೆ. ಬಗೆಬಗೆಯ ತಳಿಯ ನಾಯಿಗಳನ್ನು ಅಂದಕ್ಕಾಗಿ ಸಾಕಿ ಈ ಸಾಮಾನ್ಯ ನಾಯಿಗಳನ್ನು ಬೀದಿಯಲ್ಲಿ ಬಿಟ್ಟರೇನು ಪ್ರಯೋಜನ..? ಅಂದಕ್ಕಾಗಿ ಸಾಕುವ ನಾಯಿಗಳಿಗೆ ವಿವಿಧ ಬಗೆಯ ದುಬಾರಿ ಔಷಧಿಗಳನ್ನು ತರುತ್ತೇವೆ.,, ತಿನ್ನಲು ಅವುಗಳದ್ದೇ ಆದ ಆಹಾರಗಳನ್ನು ದುಡ್ಡು ಕೊಟ್ಟು ತರುತ್ತೇವೆ, ಮಲಗಲು ಹಾಸಿಗೆ, ಕುಡಿಯಲು ಹಾಲು, ತಿನ್ನಲು ಕೋಳಿ-ಮೀನು-ಮೊಟ್ಟೆ ಎಲ್ಲವನ್ನೂ ದುಡ್ಡು ಕೊಟ್ಟೇ ತರುತ್ತೇವೆ. ಆದರೆ ಸಾಮಾನ್ಯ ನಾಯಿಗಳಿಗೆ ಇದ್ಯಾವ ದುಬಾರಿ ಜೀವನವೂ ಬೇಡ. ನಾವು ತಿಂದು ಉಳಿದ ಆಹಾರವನ್ನು ಅವುಗಳಿಗೆ ಹಾಕಿದರೂ ಸಾಕು., ಅವುಗಳ ಹೊಟ್ಟೆ ತುಂಬುತ್ತದೆ. ಮತ್ಯಾಕೆ ನಾವು ನಾಯಿ ಮರಿಗಳನ್ನು ಬೀದಿಗೆಸೆಳೆಯುವ ನೀಚ ಕೆಲಸವನ್ನು ಮಾಡಬೇಕು?
ನಾವೆಷ್ಟೇ ಒಳ್ಳೆಯವರಾದರೂ ನಾಯಿಯಷ್ಟು ನಿಯತ್ತು ನಮ್ಮಲ್ಲಿಲ್ಲ. ಒಂದು ದಿನ ಒಂದು ಬಿಸ್ಕತ್ತು ಹಾಕಿದ ನೆನಪು ವರುಷ ಕಳೆದರೂ ನಾಯಿಗೆ ಮಾತ್ರ ನೆನಪಿರುತ್ತದೆ. ಅಷ್ಟೇ ಯಾಕೆ? ಮನೆಯನ್ನು ಹಗಳಿರುಳು ಕಾದು ನಮಗೆ ರಕ್ಷಣೆಯನ್ನೂ ನೀಡುತ್ತದೆ. ನಾಯಿಯಷ್ಟು ಬುದ್ಧಿಯೂ ಮನುಷ್ಯನಿಗರಲು ಸಾಧ್ಯವಿಲ್ಲ. ಆದ್ದರಿಂದ ನಾಯಿಯನ್ನು ಸಾಕುವವರು ಪ್ರೀತಿಯಿಂದ ಅದರ ಕೊನೆಯುಸಿರು ಇರುವವರೆಗೂ ಸಾಕಿ. ಅವುಗಳನ್ನು ಬೀದಿ ಬದಿಗೆಸೆಯುವವರು ಮಾತ್ರ ನಾಯಿ ಸಾಕುವ ಗೋಜಿಗೆ ಹೋಗಲೇಬೇಡಿ. “ರಾಷ್ಟ್ರೀಯ ಶ್ವಾನ ದಿನ’ದಂದು ನಾಯಿಯೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುವ ಮುನ್ನ ಎಲ್ಲರೂ ಸಾಮಾನ್ಯ ಸಾಕು ನಾಯಿಗಳ ಬಗ್ಗೆ ಸ್ವಲ್ಪ ಯೋಚಿಸೋಣ. ಯಾವುದೇ ಒಂದು ಹೆಣ್ಣು ಜೀವಿಗೂ ಬದುಕಿದೆ. ಆ ಹೆಣ್ಣು ಜೀವಿ ಇಲ್ಲದೇ ಹೋದರೆ ಸಂತಾನಾಭಿವೃದ್ಧಿ ಅಸಾಧ್ಯ. ಇದು ನಾಯಿಗಳಿಗೂ ಅನ್ವಯಿಸುವ ವಾಸ್ತವ ಸಂಗತಿ. ಆದ್ದರಿಂದ ಮನೆ ಮಾತ್ರವಲ್ಲ, ಮಹಾನ್ ಬ್ರಹ್ಮಾಂಡವನ್ನೇ ಕಾಯುವ ತಾಕತ್ತು ಹಾಗೂ ನಿಯತ್ತು ನಾಯಿಗಿದೆ ಎಂಬುದನ್ನು ನಾವು ಮರೆಯಬಾರದು. ಶ್ವಾನಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.