ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಪೂರಕವಾಗುವ ಎನ್ಪಿಎಸ್ ವಾತ್ಸಲ್ಯ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆಗೊಳಿಸಿದ್ದಾರೆ. ಹೊಸದಾಗಿ ನೋಂದಾಯಿತ ಅಪ್ರಾಪ್ತ ವಯಸ್ಕರ ಹೆತ್ತವರಿಗೆ ಪ್ರಾಣ್ ಕಾರ್ಡುಗಳನ್ನು (ಪರ್ಮನೆಂಟ್ ರಿಟೈರ್ಮೆಂಟ್ ಅಕೌಂಟ್ ನಂಬರ್) ನೀಡಲಾಗುತ್ತದೆ.
ಈ ಯೋಜನೆಯಲ್ಲಿ ಹೆತ್ತವರು ವರ್ಷಕ್ಕೆ ಕನಿಷ್ಠ ಒಂದು ಸಾವಿರ ರೂಪಾಯಿಗಳನ್ನು ತಮ್ಮ ಮಕ್ಕಳ ಹೆಸರಲ್ಲಿ ಉಳಿತಾಯ ಮಾಡಬಹುದು. ಮತ್ತು ಮೂರು ವರ್ಷಗಳ ನಂತರ ಹಣ ಹಿಂತೆಗೆಯಲು ಅವಕಾಶವಿರುತ್ತದೆ. ಈ ಯೋಜನೆ ಅಪ್ರಾಪ್ತ ಮಕ್ಕಳಿಗೆ ಪಿಂಚಣಿ ಖಾತೆ ಹೊಂದಲು ನೆರವಾಗುತ್ತದೆ. ಈ ಯೋಜನೆಗೆ ಆನ್ಲೈನ್ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆಗೆ ಬೇರೆ ಬೇರೆ ಅವಕಾಶಗಳಿವೆ ಇದು ದೀರ್ಘಕಾಲ ಸಾಕಷ್ಟು ಹಣ ಉಳಿತಾಯ ಮಾಡಿಕೊಳ್ಳಲು ಮಕ್ಕಳಿಗೆ ಅವಕಾಶಗಳನ್ನು ತೆರೆದಿರುವುದು ಮತ್ತು ಮಕ್ಕಳು ಬೆಳೆದು ದೊಡ್ಡವರಾದಂತಿಲ್ಲ ಅವರಿಗೆ ಹಣಕಾಸಿನ ಭದ್ರತೆಯನ್ನು ಕೂಡ ಒದಗಿಸುತ್ತದೆ ಎಂದು ಮೂಲಗಳು ತಿಳಿಸಿವೆ.
2024-25ರ ಕೇಂದ್ರ ಬಜೆಟ್ ನಲ್ಲಿ ್ರಕಟಿಸಲಾಗಿರುವ ಎನ್ಪಿಎಸ್ ವಾತ್ಸಲ್ಯ ಯೋಜನೆ ನಿಯಮಾವಳಿ ಅನ್ವಯ, ಅಪ್ರಾಪ್ತ ಮಕ್ಕಳಿಗೆ 18 ವರ್ಷ ತುಂಬುತ್ತಲೇ ಎನ್ಪಿಎಸ್ ವಾತ್ಸಲ್ಯ ಖಾತೆಗಳನ್ನು ಕೆವೈಸಿ ನಿಖರ ವಿವರಗಳೊಂದಿಗೆ ಸಾಮಾನ್ಯ ಎನ್.ಪಿ.ಎಸ್ ಖಾತೆಗಳಾಗಿ ಪರಿವರ್ತಿಸಲು ಅವಕಾಶವಿದೆ. ಪಿ.ಎಫ್.ಆರ್.ಡಿ.ಎ ನಿರ್ವಹಿಸುವ ವಾತ್ಸಲ್ಯ ಯೋಜನೆ, ಯುವ ಗ್ರಾಹಕರಿಗೆ ಸರಳ ಕೊಡುಗೆಗಳು, ಸ್ಪರ್ಧಾತ್ಮಕ ಲಾಭಗಳು, ಭಾವೀ ಪಿಂಚಣಿ ಉಳಿತಾಯಕ್ಕೆ ಉತ್ತೇಜನ ನೀಡುತ್ತದೆ.
ತಮ್ಮ ಅಪ್ರಾಪ್ತ ಮಕ್ಕಳಿಗೆ ಪಿಂಚಣಿ ಉಳಿತಾಯ ಮಾಡಿಡಲು ಹೆತ್ತವರು, ಪೋಷಕರಿಗೆ ಎನ್ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ತುಂಬು ಅವಕಾಶವಿದೆ. ಅನಿವಾಸಿ ಭಾರತೀಯರ ಸಹಿತ ಭಾರತದ ಪ್ರಜೆಗಳಿಗೆ ದೀರ್ಘಕಾಲೀನ ಹೂಡಿಕೆಗೆ ಇದು ಅವಕಾಶ ನೀಡುತ್ತದೆ.
ಅರ್ಹತೆಗಳು ಏನೇನು?
ಪಾನ್ ಕಾರ್ಡ್ ಹೊಂದಿರುವ 18 ವರ್ಷದೊಳಗಿನ ಅಪ್ರಾಪ್ತರು ಎನ್ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ವಾರ್ಷಿಕ ಕಟ್ಟಬೇಕಾದ ಕನಿಷ್ಠ ಮೊತ್ತ ಒಂದು ಸಾವಿರ ರೂಪಾಯಿ ಆಗಿರುತ್ತದೆ. ಹೆಸರು ನೋಂದಾಯಿಸಿದ ಪ್ರತೀ ಗ್ರಾಹಕ ಅಥವಾ ಖಾತೆದಾರರಿಗೆ ವಿಶಿಷ್ಟ ಕಾಯಂ ನಿವೃತ್ತಿ ಖಾತೆ ನಂಬರ್ (ಪ್ರಾಣ್) ನೀಡಲಾಗುತ್ತದೆ.
ನೋಂದಣಿ ಹೇಗೆ?
ಬ್ಯಾಂಕುಗಳು, ಅಂಚೆ ಕಚೇರಿ, ಪಿಂಚಣಿ ನಿಧಿಗಳು, ಇ-ಎನ್ಪಿಎಸ್ ಜಾಲ ಮುಖೇನ ಹೆತ್ತವರು ಎನ್ಪಿಎಸ್ ವಾತ್ಸಲ್ಯ ಯೋಜನೆಗೆ ತಮ್ಮ ಅಪ್ರಾಪ್ತ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಐಸಿಐಸಿಐ ಬ್ಯಾಂಕ್ ಈಗಾಗಲೇ ತನ್ನ ಮುಂಬೈ ಸೇವಾ ಕೇಂದ್ರದಲ್ಲಿ ಯೋಜನೆಗೆ ಚಾಲನೆ ನೀಡಿದೆ ಮತ್ತು ಹೊಸ ಖಾತೆಗಳನ್ನು ನೋಂದಾಯಿಸಿದೆ. ಯುವ ಖಾತೆದಾರರಿಗೆ ಸಾಂಕೇತಿಕವಾಗಿ ಪ್ರಾಣ್ ಕಾರ್ಡುಗಳನ್ನು ವಿತರಿಸಿದೆ. ಮಕ್ಕಳು ಎಳೆ ವಯಸ್ಸಿನಿಂದಲೇ ಉಳಿತಾಯದಲ್ಲಿ ತೊಡಗುವುದನ್ನು ಪ್ರೇರೇಪಿಸುವುದು ಸರ್ಕಾರದ ಪ್ರಸ್ತುತ ವಾತ್ಸಲ್ಯ ಯೋಜನೆಯ ಆಶಯ ಮತ್ತು ಕೂಡ ಆಗಿದೆ. ಸರ್ಕಾರದ ಈ ನಡೆಯನ್ನು ಬೆಂಬಲಿಸಿ ಐಸಿಐಸಿಐ ಮತ್ತು ಆಕ್ಸಿಸ್ ನಂತಹ ಪ್ರಮುಖ ಬ್ಯಾಂಕ್ಗಳು ಪಿಎಫ್ಆರ್ಡಿಎ ಜೊತೆ ಕೈಜೋಡಿಸಿದೆ.
ಮಕ್ಕಳ ಭವಿಷ್ಯಕ್ಕೆ ಉತ್ತಮ ಯೋಜನೆ
ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಹೆತ್ತವರಿಗೊಂದು ಸದಾವಕಾಶ ಎನ್.ಪಿ.ಎಸ್ ವಾತ್ಸಲ್ಯ ಯೋಜನೆ. ಯೋಜನೆಯಲ್ಲಿ ಖಾತೆದಾರನಿಗೆ 60 ವರ್ಷ ತುಂಬಿದ ನಂತರವೇ ಪಿಂಚಣಿ ದೊರೆಯುವುದು. ಸಂಗ್ರಹಿತ ಠೇವಣಿ ಪೈಕಿ ಶೇಕಡ 14ಅನ್ನು ಈಕ್ವಿಟಿಗಳಲ್ಲಿ, ಶೇಕಡ 9.1 ಕಾರ್ಪೊರೇಟ್ ಗಳಿಗೆ ಸಾಲ ನೀಡಲು ಮತ್ತು ಶೇಕಡ 8 ರಷ್ಟನ್ನು ಸರ್ಕಾರಿ ಭದ್ರತೆಗಳಲ್ಲಿ ತೊಡಗಿಸಲಾಗುವುದು. ತನ್ಮೂಲಕ ಇದೊಂದು ಅತ್ಯಂತ ಯೋಗ್ಯವಾದ ದೀರ್ಘಕಾಲೀನ ಉಳಿತಾಯ ಯೋಜನೆಯಾಗಿದೆ. ಎನ್ಪಿಎಸ್ ವಾತ್ಸಲ್ಯ ಸ್ಕೀಮ್ ಗ್ರಾಹಕರ ಆತಂಕ ನಿವಾರಣೆ ಸಹಿತ ಅವರ ಎಲ್ಲಾ ತೆರನಾದ ಅವಶ್ಯಕತೆಗಳಿಗೆ ಸ್ಪಂದಿಸುವ ಬದ್ಧತೆಯನ್ನು ಸರಕಾರ ಹೊಂದಿದೆ. ತನ್ಮೂಲಕ ಯೋಜನೆಯನ್ನು ಮತ್ತಷ್ಟು ಪರಿಷ್ಕರಿಸಲು ಕೂಡ ಸರಕಾರ ಸಿದ್ಧವಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ನಾಗರಾಜು ಮಡ್ಡಿರಾಳ ತಿಳಿಸಿದ್ದಾರೆ.