ಕೆಲಸ.. ಕೆಲಸ.. ಕೆಲಸ.. ದೈನಂದಿನ ಬದುಕಿನಲ್ಲಿ ಕೆಲಸದ ಒತ್ತಡದಿಂದಾಗಿ ಬಹುತೇಕ ಮಂದಿ ಔದ್ಯೋಗಿಕ ಬದುಕಿನಲ್ಲಿ ಕಳೆದು ಹೋಗಿರುವವರೇ ಹೆಚ್ಚು. ಏಕೆಂದರೆ ಹೆಚ್ಚಿನ ಮಂದಿ ಔದ್ಯೋಗಿಕ ಬದುಕಿಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ತಮ್ಮ ವೈಯುಕ್ತಿಕ ಬದುಕಿಗೆ ಅದರಲ್ಲೂ ಮುಖ್ಯವಾಗಿ ಆರೋಗ್ಯಕ್ಕೆ ನೀಡುವುದಿಲ್ಲ. “ಉದ್ಯೋಗಂ ಸರ್ವ ಲಕ್ಷಣಂ” ಎಂಬ ಮಾತಿನಂತೆ ಉದ್ಯೋಗವೇನೋ ಎಲ್ಲರಿಗೂ ಬೇಕು ಆದರೆ ಆರೋಗ್ಯದ ಕಾಳಜಿ ಮಾತ್ರ ಏಕಿಲ್ಲ ಎನ್ನುವುದೇ ಡಾಲರ್ ಪ್ರಶ್ನೆಯಾಗಿದೆ. ವೃತ್ತಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ತಮ್ಮ ಆರೋಗ್ಯದ ಕಾಳಜಿಯೂ ನೀಡುವುದು ಅತೀ ಮುಖ್ಯ. ಆಧುನಿಕೀಕರಣದ ಧಾವಂತದಲ್ಲಿ ನಮ್ಮ ಬದುಕು “ಹಿತ್ತಲ ಗಿಡ ಮದ್ದಲ್ಲ” ಎಂಬಂತಾಗಿದೆ. ಏಕೆಂದರೆ ನಿತ್ಯ ಮನೆಯಲ್ಲಿ ಮತ್ತು ದಿನನಿತ್ಯ ಕಣ್ಣೆದುರೇ ಇರುವ ಅದೆಷ್ಟೋ ಆರೊಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ನಾವು ನಿರ್ಲಕ್ಷಿಸುತ್ತಲೇ ಬಂದಿದ್ದೇವೆ. ಅವುಗಳಲ್ಲಿ ‘ಅಡುಗೆಯ ರಾಜ’ ಎಂದೇ ಪ್ರಸಿದ್ಧವಾದ ಪಾಲಕ್ ಸೊಪ್ಪು ಸಹ ಒಂದು.
ರಸ್ತೆ ಬದಿಯಲ್ಲಿ, ತರಕಾರಿ ಮಾರುಕಟ್ಟೆಗಳಲ್ಲಿ ಮತ್ತು ಮನೆ ಮನೆಗಳಿಗೆ ಮಾರಾಟ ಮಾಡಿಕೊಂಡು ಬರುವ ಪಾಲಕ್ ಸೊಪ್ಪನ್ನು ಹೆಚ್ಚಿನವರು ಬಳಸುವುದನ್ನೇ ಮರೆತು ಬಿಟ್ಟಿದ್ದಾರೆ ಎನ್ನಬಹುದು. ಏಕೆಂದರೆ ಐಷಾರಾಮಿ ಜೀವನ ಹಾಗೂ ಜೀವನ ಶೈಲಿ ಮತ್ತು ಆಧುನಿಕ ಆಹಾರ ಕ್ರಮಗಳ ನಡುವೆ ಪಾಲಕ್ ಸೊಪ್ಪು ಅಕ್ಷರಶಃ ಮೂಲೆಗುಂಪಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹಾಗಾದರೆ ಪಾಲಕ್ ಸೊಪ್ಪಿನ ಕುರಿತು ಸ್ವಲ್ಪ ತಿಳಿದುಕೊಳ್ಳೋಣ.
ಪಾಲಕ್ ಮುಖ್ಯವಾಗಿ ಸೊಪ್ಪು ತರಕಾರಿ ಜಾತಿಗೆ ಸೇರಿದ್ದು, ಇದನ್ನು ಸ್ವ ಉದ್ಯೋಗವನ್ನಾಗಿಯೂ ಸಣ್ಣ ಹಿಡುವಳಿದಾರರೂ ಪರಿಣಾಮಕಾರಿಯಾಗಿ ಬೆಳೆಯಬಹುದಾಗಿದೆ.
ಏಕೆಂದರೆ ಸೊಪ್ಪು ತರಕಾರಿಗಳನ್ನು ಬೆಳೆಯಲು ಅಧಿಕ ಸ್ಥಳಾವಕಾಶದ ಅವಶ್ಯಕತೆ ಇರುವುದಿಲ್ಲ. ಹಾಗೂ ಬಹಳ ಅಲ್ಪ ಅವಧಿಯಲ್ಲಿಯೇ ಬೆಳೆದ ಫಸಲು ಕೈಸೇರಿ ಆದಾಯವನ್ನು ಗಳಿಸಬಹುದಾಗಿದೆ. ‘ಚಿನೋಪೋಡಿಯೆಸ್’ ಪ್ರಬೇಧಕ್ಕೆ ಸೇರಿದ ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ‘ಎ’ ಮತ್ತು ‘ಸಿ’ ಯಥೇಚ್ಛವಾಗಿದೆ.
ನೀರಾವರಿಯ ಸಮರ್ಪಕ ವ್ಯವಸ್ಥೆಯಿದ್ದಲ್ಲಿ ಪಾಲಕ್ ನ್ನು ವರ್ಷಪೂರ್ತಿ ಎಲ್ಲಾ ತಿಂಗಳಲ್ಲೂ ಬೆಳೆಯಬಹುದಾಗಿದೆ.
ಪ್ರಥಮದಲ್ಲಿ ಜಮೀನನ್ನು ಚೆನ್ನಾಗಿ ಹದ ಮಾಡಬೇಕು, ಬಳಿಕ ಸಾಲಿನಿಂದ ಸಾಲಿಗೆ ಒಂದು ಅಡಿ ಹಗೂ ಬೀಜದಿಂದ ಬೀಜಕ್ಕೆ ೪ ರಿಂದ ೫ ಇಂಚು ಅಂತರದಲ್ಲಿ ಬೀಜವನ್ನು ಬಿತ್ತನೆ ಮಾಡಬೇಕು. ಬಿತ್ತಿದ ಬೀಜದ ಮೇಲೆ ಗಾಳಿಗೆ ಹಾರಿ ಹೋಗದಂತೆ ಹಾಗೂ ಪಕ್ಷಿಗಳ ಪಾಲಾಗದಂತೆ ತೆಳುವಾಗಿ ಮಣ್ಣನ್ನು ಹರಡಿ ಐದಾರು ದಿನಕ್ಕೊಮ್ಮೆ ನೀರನ್ನು ಹಾಯಿಸಬೇಕು. ಇದಕ್ಕೆ ಅತೀಯಾದ ಕಾಳಜಿಯ ನಿರ್ವಹಣೆ ಅಗತ್ಯವಿಲ್ಲದ ಕಾರಣ ನಾಲ್ಕರಿಂದ ಆರು ವಾರಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ. ಕಟಾವಿನ ಸಂದರ್ಭದಲ್ಲಿ ಬೇರು ಸಹಿತವಾಗಿ ಗಿಡವನ್ನು ಕೀಳದೆ ಕಂಡದ ಸ್ವಲ್ಪ ಅಂಶವನ್ನು ಭೂಮಿಯಲ್ಲೇ ಬಿಟ್ಟು ಗಿಡವನ್ನು ಕತ್ತರಿಸಬೇಕು. ಏಕೆಂದರೆ ಮತ್ತೆ ಅದೇ ಕಾಂಡವು ಚಿಗುರಿ ಬೆಳೆಯುವುದರಿಂದ ಹೀಗೇ ನಾಲ್ಕೈದು ಬಾರಿ ಫಸಲನ್ನು ಪಡೆಯಬಹುದು ಮತ್ತು ಕಡಿಮೆ ಬಂಡವಾಳದೊಂದಿಗೆ ಅಧಿಕ ಫಸಲನ್ನು ಪಡೆಯಬಹುದು. ಕಟಾವಿನ ಸಂದರ್ಭದಲ್ಲಿ ಮಾರುಕಟೆಯ ಬೇಡಿಕೆಯನ್ನು ಸ್ವಲ್ಪ ಅರಿತುಕೊಂಡರೆ ಉತ್ತಮ. ಈ ಬೆಳೆಗೆ ಕಪ್ಪು ಮಣ್ಣಾದರೆ ಉತ್ತಮ ಇಳುವರಿಯೂ ಬರುತ್ತದೆ. ಗಿಡದ ಸುತ್ತ ನೀರು ನಿಲ್ಲದಂತೆ ವಿಶೇಷ ಕಾಳಜಿಯನ್ನು ವಹಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಈ ಬೆಳೆಗೆ ಮಣ್ಣಿನ ಸಾರದ ಅಂಶ ೬.೦೦ ಯಿಂದ ೭.೦೦ ಇದ್ದರೆ ಸಾಕಾಗುತ್ತದೆ. ಈ ಬೆಳೆಗೆ ರೋಗದ ಹಾವಳಿ ಅತ್ಯಂತ ಕಡಿಮೆಯೆನ್ನಬಹುದು, ಬಂದಲ್ಲಿ ಎಲೆಚುಕ್ಕಿ ರೋಗವಷ್ಟೇ ಬಾಧಿಸಬಹುದು.
ಪಾಲಕ್ ಸೊಪ್ಪಿನಲ್ಲಿ ವಿವಿಧ ತಳಿಗಳಿದ್ದು ಅವುಗಳಲ್ಲಿ ಅರ್ಲಿ ಸ್ಮೂಕ್ ಲೀಫ್, ಪೂಸಾ ಸ್ವರ್ಣ, ಲಾಂಗ್ ಹಾರ್ಡಿಂಗ್, ವರ್ಜೀನಿಯಾ, ಪೂಸಾ ಜ್ಯೋತಿ, ಲಾಂಗ್ ಸ್ಟಾಂಡಿAಗ್ ಮುಂತಾದ ತಳಿಗಳನ್ನು ಬೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಹಿತ ಮಿತವಾಗಿ ಮಳೆ ಬೀಳುವ ಪ್ರದೇಶಗಳಿಗೆ ಈ ಬೆಳೆಯು ಹೆಚ್ಚು ಸೂಕ್ತವಾಗಿದ್ದು, ಅತೀ ಹೆಚ್ಚು ಮಳೆ ಬೀಳುವ ಮಲೆನಾಡಿಗೆ ಈ ಬೆಳೆಯು ಹೆಚ್ಚು ಸೂಕ್ತವಲ್ಲ.
ಆರೋಗ್ಯ ವರ್ಧನೀಯ ಗುಣಗಳ ಬಗ್ಗೆ ತಿಳಿದುಕೊಳ್ಳೋಣ.
ಹಸಿ ತರಕಾರಿಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆತು ದೇಹದ ಬೆಳವಣ ಗೆಗೆ ಸಹಾಯಕ, ಆದ್ದರಿಂದ ಸೊಪ್ಪು ತರಕಾರಿಗಳಲ್ಲಿ ಪಾಲಕ್‌ಗೇ ಅಗ್ರಸ್ಥಾನ ಎನ್ನಬಹುದು.
ಇಂದಂತೂ ಸೇಲ್ಫಿ ಮೇನಿಯಾ ಆಗಿ ಬಿಟ್ಟಿದೆ. ಸೆಲ್ಫಿ ತೆಗೆದುಕೊಂಡ ನಂತರ ಅದನ್ನು ಝೂಮ್ ಮಾಡಿ ನೋಡಿ ನಾನು ಹೇಗಿದ್ದೀನಿ ಅಂತ ನಿತ್ಯ ನೋಡಿಕೊಳ್ಳುತ್ತೇವೆ. ಮುಖ ಸುಕ್ಕಾದಂತೆ, ನೆರಿಗೆ ಬಿದ್ದಂತೆ ಕಾಣುತ್ತಿದೆಯಾ..? ಪಾಲಕ್ ಸೊಪ್ಪನ್ನು ಅಡುಗೆಯಲ್ಲಿ ಬಳಸಿ ಅಥವಾ ಪಾಲಕ್ ಸೊಪ್ಪಿನ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖವು ಕಾಂತಿಯುಕ್ತವಾಗಿ ಕಂಗೊಳಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಶೇಷವಾಗಿ “ಪ್ರೋಲೇಟ್” ಎಂಬ ಅಂಶವಿದ್ದು, ರಕ್ತದೊತ್ತಡವನ್ನು ನಿಯತ್ರಂಣದಲ್ಲಿಡುತ್ತದೆ. ಮತ್ತು ಹೃದ್ರೋಗವನ್ನು ತಡೆಯುತ್ತದೆ.
ಈ ಸೊಪ್ಪಿನಲ್ಲಿರುವ “ಕ್ಯಾರೋಟಿನೈಡ್” ಎಂಬ ಅಂಶವಿದ್ದು, ಮನುಷ್ಯನನ್ನು ಜೀವಂತವಾಗಿ ಕೊಲ್ಲುವ ದೇಹದ ಕೊಲೆಸ್ಟಾಲ್‌ನ್ನು ತೆಗೆದು ಹಾಕಿ ಕೊಲೆಸ್ಟಾçಲ್‌ನ್ನು ನಿಯತ್ರಂಣದಲ್ಲಿಡುತ್ತದೆ. ಇಂದಿನ ದಿನಗಳಲಂತೂ ಚಿಕ್ಕ ಚಿಕ್ಕ ಮಕ್ಕಳೂ ಕನ್ನಡಕವನ್ನು ಧರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಹಿಂದಿನ ಕಾಲದಲ್ಲಿ ೪೦-೫೦ ವಯಸ್ಸು ದಾಟಿದಾಗ ಮಾತ್ರ ಕನ್ನಡಕ್ಕಕ್ಕೆ ಬೆಲೆ ಎನ್ನುವಂತಿದ್ದ ಕಾಲ. ಆದರೆ ಇಂದು ೩-೪ ವರ್ಷಕ್ಕೇ ಮಕ್ಕಳಿಗೆ ಕನ್ನಡದ ಹೊರೆ ಬೀಳುತ್ತಿದೆ.
ಮಕ್ಕಳಿಗೆ ಪಾಲಕ್ ಸೊಪ್ಪಿನ ಆಹಾರವನ್ನು ನೀಡಿದ್ದಲ್ಲಿ ನರಗಳು ಶಕ್ತಿಯುತವಾಗಿ ದೃಷ್ಟಿದೋಷವನ್ನು ಗಣನೀಯವಾಗಿ ನಿಯತ್ರಿಸುತ್ತದೆ.
ಈ ಸೊಪ್ಪಿನಲ್ಲಿ ಮನುಷ್ಯನ ಜ್ಞಾಪಕ ಶಕ್ತಿಯನ್ನು ವೃದ್ಧಿಸುವ ವಿಶೇಷ ಅಂಶವು ಇದ್ದು ನಿತ್ಯ ಆಹಾರ ಕ್ರಮದಲ್ಲಿ ಇದನ್ನು ಬಳಸುವುದನ್ನು ರೂಢಿ ಮಾಡಿಕೊಳ್ಳುವುದು ಉತ್ತಮ. ವಾತ ಇಲ್ಲವೆ ಮೊದಲಾದ ಕೀಲು ನೋವು ಮತ್ತು ಗಂಟು ನೋವಿಗೂ ಇದು ರಾಮ ಬಾಣವಾಗಿದೆ.
ಪಾಲಕ್ ಸೊಪ್ಪಿನ ನಿತ್ಯ ಸೇವನೆಯಿಂದ ರಕ್ತ ಹೀನತೆ ಕಡಿಮೆಯಾಗಿ ರಕ್ತ ವೃದ್ಧಿಯಾಗುತ್ತದೆ.
ಚರ್ಮದ ಕಾಂತಿಯನ್ನು ಹೆಚ್ಚಿಸುವ ವಿಟಮಿನ್-ಂ ಪಾಲಕ್ ಸೊಪ್ಪಿನಲ್ಲಿ “ಸಿ” ಜೀವಸತ್ವವಿದ್ದು ದೇಹದಲ್ಲಿ ಹೊಸ ಜೀವಕೋಶಗಳ ಬೆಳವಣ ಗೆಗೆ ಸಹಾಯವನ್ನು ಮಾಡಿ ಕ್ಯಾನ್ಸರ್‌ನ್ನು ನಿಯತ್ರಿಸುತ್ತದೆ.
ತ್ವಚೆಯ ತಳದಲ್ಲಿ ಶೇಖರಣೆಯಾಗಿ ಮೊಡವೆ ಹೆಚ್ಚಲು ಕಾರಣವಾಗಿರುವ ವಿಷಕಾರಿ ಅಂಶಗಳನ್ನು ರಕ್ತದಿಂದಲೇ ತೊಡೆದು ಹಾಕುವ ಗುಣ ಪಾಲಕ್ ಸೊಪ್ಪಿನಲ್ಲಿದೆ. ಬೊಕ್ಕ ತಲೆ ಸಮಸ್ಯೆಯೇ ಪ್ರಮುಖವಾಗಿರುವ ಇಂದಿನ ದಿನದಲ್ಲಿ ಇಂತಹ ಸಮಸ್ಯೆ ಇರುವವರು ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಪಾಲಕ್ ಜ್ಯೂಸ್ ಕುಡಿಯುವುದರಿಂದ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು. ಕ್ಯಾನ್ಸರ್ ಅಂದ್ರೆ ಸಾಕೂ ಎಲ್ಲರೂ ಗಾಬರಿಯಾಗುತ್ತಾರೆ, ಏಕೆಂದರೆ ಮೃತ್ಯುವನ್ನೇ ತರಬಲ್ಲ ಕಾಯಿಲೆ ಇದು. ಆದರೆ ಕ್ಯಾನ್ಸರ್ ರೋಗ ಲಕ್ಷಣದ ಪ್ರಾರಂಭದಲ್ಲೇ ಪಾಲಕ್ ಸೇವನೆಯನ್ನು ಮಾಡುವುದರಿಂದ
ದೇಹದಲ್ಲಿರುವ ಕ್ಯಾನ್ಸರ್‌ನ ಕಣಗಳನ್ನು ಕೊಂದು ಹೊಸ ಜೀವಕೋಶಗಳ ಬೆಳವಣ ಗೆಯನ್ನು ಮಾಡುಲ್ಲಿ ಪಾಲಕ್‌ನ ಪಾತ್ರ ಅತ್ಯಂತ ಪ್ರಮುಖವಾದುದ್ದು.
ಒಟ್ಟಿನಲ್ಲಿ ನಮ್ಮ ಮನೆಯಲ್ಲೇ ಸಿಗುವ ಹಲವಾರು ಆರೋಗ್ಯದಾಯಕ ಸೊಪ್ಪು ತರಕಾರಿಗಳನ್ನು ನಾವು ಸರಿಯಾಗಿ ಅದರ ಪ್ರಯೋಜನಗಳನ್ನು ತಿಳಿದುಕೊಳ್ಳದೇ ಫಾಸ್ಟ್ಫುಡ್‌ಗೆ ದುಂಬಾಲು ಬಿದ್ದು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಶತಮಾನ ಕಂಡ ದೊಡ್ಡ ದುರಂತವೇ ಸರಿ. ಹಿತ್ತಲ ಗಿಡ ಮದ್ದಲ್ಲ ಎಂಬ ನಾಣ್ಣುಡಿಯಂತೆ ಅತ್ಯಂತ ಸರಳ ಹಾಗೂ ಖರ್ಚು ರಹಿತವಾದ ಫಾಲಕ್ ಸೊಪ್ಪು ಒಂದರಿಂದಲೇ ನಮ್ಮ ಆರೋಗ್ಯವನ್ನು ಅದ್ಭುತವಾಗಿ ಕಾಪಾಡಿಕೊಳ್ಳಬಹುದು ಎಂದಾದರೆ ಏಕೆ ನಾವದನ್ನು ನಿರ್ಲಕ್ಷ್ಯ ಮಾಡಬೇಕು? ದಿನದಲ್ಲಿ ಒಂದು ಹೊತ್ತಿನ ಆಹಾರದಲ್ಲಿ ಪಾಲಕ್ ಸೊಪ್ಪಿನ ಅಡುಗೆಯನ್ನು ಪ್ರತೀ ಕುಟುಂಬಗಳು ಕಡ್ಡಾಯ ಮಾಡಿಕೊಂದಲ್ಲಿ ಗಳಿಸಿದ ದುಡ್ಡನ್ನು ಆಸ್ಪತ್ರೆಗೆ ಸುರಿಯುವುದನ್ನೂ ತಪ್ಪಿಸಿ ಕುಟುಂಬದ ಆದಾಯವನ್ನು ಕಾಪಾಡಬಹುದು. ಹಾಗೂ ಹಿಡುವಳಿ ರಹಿತ ಕುಟುಂಬಗಳು ಇದೇ ಕೃಷಿಯನ್ನು ಆದಾಯೋತ್ಪನ್ನ ಚಟುವಟಿಕೆಯಾಗಿ ನಡೆಸಿ ಆದಾಯವನ್ನು ಗಳಿಸುವಲ್ಲಿಯೂ ಸಹಕಾರಿಯಾಗಬಹುದು.
ಲೇಖನ :
ಸಂತೋಷ್ ರಾವ್, ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ,
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಫೋಟೋ ಕೃಪೆ: ಅಂತರ್ಜಾಲ