ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 31ನೇ ಅನಾವರಣ ಚಾತುರ್ಮಾಸ್ಯ ನಡೆಯಲಿದೆ.
60 ದಿನಗಳಲ್ಲಿ ಕನಿಷ್ಠ 60 ವ್ಯಕ್ತಿ-ವಿಷಯ- ವಸ್ತುಗಳ ಅನಾವರಣ
ಅನಾವರಣ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಪರಮಪೂಜ್ಯರು ಆಷಾಢ ಶುದ್ಧ ಹುಣ್ಣಿಮೆಯಿಂದ ಬಾಧ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದು, ವರ್ಷಾಕಾಲದಲ್ಲಿ ಲೋಕಹಿತಕ್ಕಾಗಿ ಪರಮ ಪುರುಷನ ಆರಾಧನೆ, ಅನುಷ್ಠಾನಗಳಲ್ಲಿ ನಿರತರಾಗುವರು . ಅನಾವರಣ ಚಾತುರ್ಮಾಸ್ಯದ ಪ್ರತಿದಿನವೂ ಸಮಾಜದ ವಿಶಿಷ್ಟ ವ್ಯಕ್ತಿಗಳು, ವಿಷಯಗಳು ಮತ್ತು ವಸ್ತುಗಳ ಅನಾವರಣ ಈ ಬಾರಿಯ ವಿಶೇಷ.
60 ದಿನಗಳಲ್ಲಿ ಕನಿಷ್ಠ 60 ವ್ಯಕ್ತಿ-ವಿಷಯ- ವಸ್ತುಗಳ ಅನಾವರಣಕ್ಕೆ ಈ ಚಾತುರ್ಮಾಸ್ಯ ಸಾಕ್ಷಿಯಾಗಲಿದೆ. ಸಮಾಜದಲ್ಲಿ ಎಲೆಮರೆಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತಿರುವ, ಇದುವರೆಗೆ ಸಮಾಜಕ್ಕೆ ತೆರೆದುಕೊಳ್ಳದ ವ್ಯಕ್ತಿಗಳು, ಸಮಾಜದಲ್ಲಿ ಬೆಳಕಿಗೆ ಬರದ ಶ್ರೀಮಠದ ಭವ್ಯತೆ, ರಾಮಚಂದ್ರಾಪುರ ಮಠದ ಮಹತ್ವದ ಯೋಜನೆ ಗಳ ಅನಾವರಣ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ.
ಇದನ್ನೂ ಓದಿ: ಕಾಶಿ ವಿಶ್ವನಾಥ ದೇವಾಲಯಕ್ಕೆ ಪ್ರವೇಶಿಸಲು ಕ್ಯೂಆರ್ ಕೋಡ್ ಬಳಕೆ
ಆಷಾಢ ಶುದ್ಧ ಹುಣ್ಣಿಮೆಯಂದು ವ್ಯಾಸಪೂಜೆ ಮತ್ತು ಗುರು ಪರಂಪರೆ ಪೂಜೆಯೊಂದಿಗೆ 31ನೇ ವರ್ಷದ ವ್ರತಾರಂಭ ಮಾಡುವರು. ಜುಲೈ 24ರಂದು ಶ್ರೀವರ್ಧಂತಿ, ಆಗಸ್ಟ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳ ಜತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶಗಳು ಚಾತುರ್ಮಾಸ್ಯದಲ್ಲಿ ಆಯೋಜಿತವಾಗಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಸೆಪ್ಟೆಂಬರ್ 18ರಂದು ಸೀಮೋಲ್ಲಂಘನೆಯೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ.
ಒಂದು ಲಕ್ಷಕ್ಕೂ ಅಧಿಕ ಮಂದಿ ಗಣ್ಯರು, ಶಿಷ್ಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
ಚಾತುರ್ಮಾಸ್ಯದಲ್ಲಿ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಪರಮಪೂಜ್ಯರು ಸಹಸ್ರ ಗಂಗಾಜಲ ಅಭಿಷೇಕಕ್ಕೆ ಸಂಕಲ್ಪಿಸಿದ್ದಾರೆ. ಪವಿತ್ರ ಗಂಗಾಜಲದಿಂದ ತುಂಬಿದ ಸುವರ್ಣ, ರಜತ ಮತ್ತು ತಾಮ್ರ ಕಲಶಗಳ ಸೇವೆಗೆ ಭಕ್ತರಿಗೆ ಅವಕಾಶವಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಕರಾರ್ಚಿತ ದೇವರಿಗೆ ಸರ್ವಸೇವೆ- ಸಮರ್ಪಣೆಗೆ ಅವಕಾಶ ಇದೆ. ಅಂತೆಯೇ ಮಹಾಸೇವೆ, ತುಲಾಭಾರ ಸೇವೆ, ಸ್ವರ್ಣಪಾದುಕೆ ಭಿಕ್ಷಾಸೇವೆ, ಸ್ವರ್ಣಪಾದುಕಾ ಪೂಜೆ, ಪಾದುಕಾಪೂಜೆ, ಅನ್ನದಾನ, ಸುವಸ್ತು ಸಮರ್ಪಣೆ ಮತ್ತಿತರ ಸೇವೆಗಳನ್ನೂ ಸಲ್ಲಿಸಲು ಅವಕಾಶವಿದೆ. ಎರಡು ತಿಂಗಳ ಅವಧಿಯ ಚಾತುರ್ಮಾಸ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಗಣ್ಯರು, ಶಿಷ್ಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಗತ್ಯ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು-ಕಫಕ್ಕೆ ಸರಳವಾದ ಮನೆ ಮದ್ದು