ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಭಾರತ, ಚೀನಾ ಮತ್ತು ಅಮೆರಿಕದ ನಂತರ ಜಗತ್ತಿನ ಮೂರನೇ ಅತಿ ದೊಡ್ಡ ವಿದ್ಯುನ್ಮಾನ ತ್ಯಾಜ್ಯ ಉತ್ಪಾದಕ ರಾಷ್ಟ್ರವು ಹೌದು. ಹೀಗಾಗಿ ವೃತ್ತಾಕಾರದ ಆರ್ಥಿಕತೆಯ ಪರಿಕಲ್ಪನೆ ಆಧರಿಸಿರುವ ದುರಸ್ತಿ ಮಾಡುವ ಹಕ್ಕು ಯೋಜನೆ, ಜಾರಿಗೆ ತರಲು ಕೇಂದ್ರ ಸರ್ಕಾರ ಯೋಜಿಸಿದೆ. ಹೆಚ್ಚುತ್ತಿರುವ ಇ-ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸುವ ಮತ್ತು ದುರಸ್ತಿ ಮಾಡಲು ಸುಲಭವಾದ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.
ಏನಿದು ದುರಸ್ತಿ ಮಾಡುವ ಹಕ್ಕು?
ಈ ಪರಿಕಲ್ಪನೆ, ಗ್ರಾಹಕರು ಒಂದು ಉತ್ಪನ್ನವನ್ನು ಖರೀದಿಸಿದಾಗ, ಅವರೇ ಅದರ ಸಂಪೂರ್ಣ ಹಕ್ಕುದಾರರು ಎಂದು ಹೇಳುತ್ತದೆ. ಇದರರ್ಥ, ಗ್ರಾಹಕರು ರಿಪೇರಿಗಾಗಿ ತಯಾರಕರನ್ನು ಕಾಯದೆ, ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಉತ್ಪನ್ನವನ್ನು ದುರಸ್ತಿ ಮಾಡಿಸಿಕೊಳ್ಳಲು ಮತ್ತು ಮಾರ್ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ದುರಸ್ತಿ ಮತ್ತು ಬಿಡಿಭಾಗಗಳ ಮಾರುಕಟ್ಟೆಯ ಏಕಸ್ವಾಮ್ಯ ಹೊಂದಿರುವ ಕಾರುಗಳು, ಮೊಬೈಲ್ ಗಳು ಮತ್ತು ಇತರ ಸರಕುಗಳ ತಯಾರಕರು ಸ್ವಯಂ ಅಥವಾ ಮೂರನೇ ವ್ಯಕ್ತಿಗಳಿಂದ ದುರಸ್ತಿಗೆ ಅಗತ್ಯವಾದ ಉತ್ಪನ್ನ ವಿವರಗಳನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಯೋಜಿಸಿದೆ.
ಗ್ರಾಹಕರಿಗೆ ದುರಸ್ತಿ ಹಕ್ಕು ನೀಡುವ ಉದ್ದೇಶವೇನು?
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಎಲೆಕ್ಟ್ರಾನಿಕ್ ಉಪಕರಣಗಳಿಗಾಗಿ ದುರಸ್ತಿ ಸೂಚ್ಯಂಕವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ದುರಸ್ತಿ ಹಕ್ಕು ಕಾರ್ಯಗಾರದಲ್ಲಿ ಈ ಬಗ್ಗೆ ಸಚಿವಾಲಯ ಘೋಷಣೆಯನ್ನೂ ಮಾಡಿದೆ. ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಅವರ ಪ್ರಕಾರ, ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವುದರಿಂದ, ದೇಶ ಸ್ಪಂದಿಸುವ ಮತ್ತು ಅತ್ಯುತ್ತಮ ತಂತ್ರಜ್ಞಾನದ ದುರಸ್ತಿ ವ್ಯವಸ್ಥೆ ಹೊಂದಿರಬೇಕು. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ, ಗ್ರಾಹಕರಿಗೆ ದುರಸ್ತಿ ಹಕ್ಕು ನೀಡಲು ಬಯಸಿದೆ.
ದುರಸ್ತಿ ಮಾಡುವ ಹಕ್ಕು ಕುರಿತ ವೆಬ್ಸೈಟ್ ಆರಂಭ
ಕೇಂದ್ರ ಸರ್ಕಾರ ಈಗಾಗಲೇ ದುರಸ್ತಿ ಹಕ್ಕು ಕುರಿತ ಹೋಟೆಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್ ನಲ್ಲಿ 63 ಕಂಪನಿಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳಲ್ಲಿ 23 ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ವಲಯಕ್ಕೆ ಸೇರಿವೆ. ಗ್ರಾಹಕರಿಗೆ ತಮ್ಮ ಸಾಧನೆಗಳನ್ನು ದುರಸ್ತಿ ಮಾಡಲು ಅಗತ್ಯ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಪೋರ್ಟಲ್ ಸ್ಥಾಪಿಸಲಾಗಿದೆ. ಸಚಿವಾಲಯ ಶೀಘ್ರದಲ್ಲೇ ನಿಯಂತ್ರಕ ಚೌಕಟ್ಟನ್ನು ರೂಪಿಸಲಿದೆ ಎಂದು ಹೇಳಲಾಗಿದೆ.
ರೇಟಿಂಗ್ ವ್ಯವಸ್ಥೆ
ಯೋಜನೆಯು ಗ್ರಾಹಕರಿಗೆ ತಮ್ಮ ಖರೀದಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡು ನಿರ್ಧಾರಕ್ಕೆ ಬರಲು ಅನುವು ಮಾಡಿಕೊಡುತ್ತದೆ. ತಯಾರಕರು ಉತ್ಪನ್ನದ ದುರಸ್ತಿ ಸೂಚ್ಯಂಕವನ್ನು ಗ್ರಾಹಕರಿಗೆ ಪ್ರದರ್ಶಿಸಬೇಕಾಗುತ್ತದೆ. ಉತ್ಪನ್ನಗಳನ್ನು 1 ರಿಂದ 5 ರ ಸ್ಲೈಡಿಂಗ್ ಸ್ಕೇಲ್ ನಲ್ಲಿ ರೇಟ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .ಸುಲಭವಾಗಿ ಹಾನಿಗೊಳಗಾಗುವ ಅಪಾಯವಿರುವ ಉತ್ಪನ್ನಗಳಿಗೆ ಕಡಿಮೆ ಅಂಕ, ಅಂದರೆ ಒಂದನ್ನು ನಿಗದಿಪಡಿಸಲಾಗುತ್ತದೆ. ನಿರ್ದಿಷ್ಟ ಭಾಗವನ್ನು ಪರೀಕ್ಷಿಸಲು ಈ ಉತ್ಪನ್ನಗಳನ್ನು ಸಂಪೂರ್ಣವಾಗಿ ಬೇರ್ಪಡಿಸಲಾಗುತ್ತದೆ. ಸುಲಭವಾಗಿ ಬಿಡಿ ಭಾಗಗಳನ್ನು ಪರೀಕ್ಷಿಸಬಹುದಾದರೆ ಮತ್ತು ಸ್ವಲ್ಪ ಸಂಕೀರ್ಣ ಬೇರ್ಪಡಿಸುವಿಕೆಯ ಅಗತ್ಯವಿರುವ ಉತ್ಪನ್ನಗಳಿಗೆ 3 ಅಂಕಗಳನ್ನು ನೀಡಲಾಗುತ್ತದೆ. ದುರಸ್ತಿ ಮಾಡಲು ಸುಲಭವಾದ ಉತ್ಪನ್ನಗಳು, ಬ್ಯಾಟರಿ ಅಥವಾ ಬೇರ್ಪಡಿಸುವ ಅಗತ್ಯವಿಲ್ಲದೆ ನೇರವಾಗಿ ರಿಪೇರಿ ಮಾಡಬಹುದಾದ ಉತ್ಪನ್ನಗಳಿಗೆ ಗರಿಷ್ಠ 5 ಅಂಕಗಳನ್ನು ನೀಡಲಾಗುತ್ತದೆ.
ಗ್ರಾಹಕರ ನೆರವಿಗಾಗಿ ಪೋರ್ಟಲ್ ಆರಂಭ
ಈಗಾಗಲೇ ಕೇಂದ್ರ ಸರ್ಕಾರ ರೈಟು ರಿಪೇರಿ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ರಾಷ್ಟ್ರೀಯ ಗ್ರಾಹಕರ ದಿನದಂದು ಇದಕ್ಕೆ ಚಾಲನೆ ನೀಡಿದ್ದಾರೆ. ರೈಟ್ ಟು ರಿಪೇರ್ ಪೋರ್ಟಲ್ ನ ಮುಖ್ಯ ಉದ್ದೇಶವೆಂದರೆ ಗ್ರಾಹಕರಿಗೆ ದೂರುಗಳನ್ನು ನೋಂದಾಯಿಸಲು ಆನ್ಲೈನ್ ವೇದಿಕೆ ಒದಗಿಸುವುದು. ಈ ಪೋರ್ಟಲ್ ಮೂಲಕ ಯಾವುದೇ ರೀತಿಯ ದೂರನ್ನು ನೋಂದಾಯಿಸಲು, ದೇಶದ ನಾಗರಿಕರು ಉತ್ಪನ್ನದ ಹೆಸರು ಉತ್ಪನ್ನ ಮಾದರಿ ಮತ್ತು ದೂರಿನ ಸ್ವರೂಪದಂತಹ ಮೂಲಭೂತ ಮಾಹಿತಿ ನಮೂದಿಸಬೇಕು. ನಂತರ ಅವರು ಸುಲಭವಾಗಿ ದೂರನ್ನು ನೋಂದಾಯಿಸಬಹುದು. ಇದರಲ್ಲಿ, ಒಮ್ಮೆ ದೂರು ದಾಖಲಿಸಿದ ನಂತರ, ಪೋರ್ಟಲ್ ದೂರುದಾರರಿಗೆ ವಿಶಿಷ್ಟವಾದ ದೂರು ಸಂಖ್ಯೆ ಮತ್ತು ವ್ಯವಹಾರಕ್ಕಾಗಿ ಸಮಯ ಒದಗಿಸುತ್ತದೆ. ಇದಲ್ಲದೆ, ರೈಟ್ ಟು ರಿಪೇರಿ ಪೋರ್ಟಲ್ ಮೂಲಕ, ತಮ್ಮ ದೂರುಗಳನ್ನು ತಾವಾಗಿಯೇ ಪರಿಹರಿಸಲು ಈ ಫಲರಾದ ಗ್ರಾಹಕರಿಗೆ ಆನ್ಲೈನ್ ಸಹಾಯವನ್ನು ಸಹ ಒದಗಿಸಲಾಗುತ್ತದೆ.
ದುರಸ್ತಿ ಸೂಚ್ಯಂಕ ಎಂದರೇನು?
ಇದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಹೊಸ ಯೋಜನೆ. ರಿಪರೆಬಿಲಿಟಿ (ದುರಸ್ತಿ) ಸೂಚ್ಯಂಕವು ಮೊಬೈಲ್ ಫೋನ್ ಗಳಂತಹ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ದುರಸ್ತಿ ಸೂಚ್ಯಂಕವನ್ನು ನೀಡುತ್ತದೆ. ಇದು ತಾಂತ್ರಿಕ ದಾಖಲೆಗಳ ಲಭ್ಯತೆ, ಬೇರ್ಪಡಿಸುವಿಕೆಯ ಸರಳತೆ, ಬಿಡಿ ಭಾಗಗಳ ಲಭ್ಯತೆ ಮತ್ತು ಬೆಳೆಗಳನ್ನು ಆಧರಿಸಿರುತ್ತದೆ. ಈ ಸೂಚ್ಯಂಕ, ಗ್ರಾಹಕರು ಉತ್ಪನ್ನವನ್ನು ಖರೀದಿಸುವ ಮೊದಲು ಎಷ್ಟು ಸುಲಭವಾಗಿ ಸರಿಪಡಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಪ್ರಸ್ತಾವಿತ ಸೂಚ್ಯಂಕವನ್ನು ಹೋಲುವ ಯೋಜನೆಗಳು ಅಮೆರಿಕ, ಫ್ರಾನ್ಸ್ ನಂತಹ ಕೆಲವು ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿವೆ. ವೃತ್ತಾಕಾರದ ಆರ್ಥಿಕತೆಯ ಪರಿಕಲ್ಪನೆಯನ್ನು ಆಧರಿಸಿರುವ ಈ ಯೋಜನೆ, ಹೆಚ್ಚುತ್ತಿರುವ ಇ-ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸುವ ಮತ್ತು ದುರಸ್ತಿ ಮಾಡಲು ಸುಲಭವಾದ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ. ಚೀನಾ ಮತ್ತು ಅಮೇರಿಕಾದ ನಂತರ ಭಾರತ, ಜಗತ್ತಿನ ಮೂರನೇ ಅತಿ ದೊಡ್ಡ ವಿದ್ಯುನ್ಮಾನ ತ್ಯಾಜ್ಯ ಉತ್ಪಾದಕ ರಾಷ್ಟ್ರವಾಗಿದೆ.
ಸ್ಥಳೀಯ ಮಾರುಕಟ್ಟೆಗಳಲ್ಲಿ ಬಿಡಿ ಭಾಗಗಳ ಕೊರತೆ
ಕಾರ್ಯಗಾರದಲ್ಲಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಭರತ್ ಖೇರಾ, ಯೋಜನೆಯ ಯಶಸ್ಸಿಗೆ ಪಾರದರ್ಶಕತೆ, ಕೈಗೆಟುಕುವ ದರದಲ್ಲಿ ದುರಸ್ತಿ, ಗ್ರಾಹಕರ ಜಾಗೃತಿ ಹೆಚ್ಚಿಸುವುದು ಮತ್ತು ಸ್ಥಳೀಯ ದುರಸ್ತಿದಾರರಿಗೆ ಬೆಂಬಲ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರ ಸ್ಥಳೀಯ ಮಾರುಕಟ್ಟೆಗಳಲ್ಲಿ ನೈಜ ಬಿಡಿ ಭಾಗಗಳ ಕೊರತೆ, ಉತ್ಪನ್ನ ಘಟಕಗಳೊಂದಿಗೆ ಹೊಂದಾಣಿಕೆಯ ಸಮಸ್ಯೆಗಳು ಮತ್ತು ಗ್ರಾಹಕರು ತಮ್ಮ ಸ್ವಂತ ಸಾಧನಗಳನ್ನು ದುರಸ್ತಿ ಮಾಡಲು ಮಾಹಿತಿಯ ಕೊರತೆ ಉಂಟಾಗಬಹುದು, ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ.