ಗುರುಕೃಪಾ ಹಿ ಕೇವಲಮ್ , ಶಿಷ್ಯ ಪರಮ-ಮಂಗಲಮ್ !
ಗುರುಪೂರ್ಣಿಮೆ (ವ್ಯಾಸ ಪೂರ್ಣಿಮೆ) ಅಂದರೆ ಶಿಷ್ಯನೋರ್ವನ ಜೀವನದಲ್ಲಿ ಬರುವಂತಹ ಮಹತ್ವದ ದಿನ. ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ.
ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಇಂತಹ ಮಹಾನ್ ಗುರುಗಳ ಋಣವನ್ನು ತೀರಿಸುವುದು ಅಸಾಧ್ಯ. ಆದರೂ ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ.
ಗುರುವು ದೇವರ ಭೌತಿಕ ಅಭಿವ್ಯಕ್ತಿ. ಹಿಂದೂ ಸಂಸ್ಕೃತಿಯು ಗುರುವನ್ನು ದೇವರಿಗಿಂತ ಉನ್ನತ ಪೀಠದಲ್ಲಿ ಇರಿಸಿದೆ; ಏಕೆಂದರೆ ಗುರುವು ಅನ್ವೇಷಕನಿಗೆ ದೇವರ ಸಾಕ್ಷಾತ್ಕಾರಕ್ಕಾಗಿ ಆಧ್ಯಾತ್ಮಿಕ ಅಭ್ಯಾಸವನ್ನು ಕಲಿಸುತ್ತಾನೆ, ಅದನ್ನು ಅವನಿಂದ ಮಾಡುತ್ತಾನೆ ಮತ್ತು ದೇವರನ್ನು ಅರಿತುಕೊಳ್ಳಲು ಸಹಾಯ ಮಾಡುತ್ತಾನೆ. ಗುರುವು ವಿವಿಧ ರೀತಿಯಲ್ಲಿ ಮಾರ್ಗದರ್ಶನ ಮತ್ತು ಪ್ರಜ್ಞಾಪೂರ್ವಕವಾಗಿ ತನ್ನ ಅನುಗ್ರಹವನ್ನು ಶಿಷ್ಯರಿಗೆ ಜೀವಮಾನದುದ್ದಕ್ಕೂ ನಿರಂತರವಾಗಿ ನೀಡುತ್ತಾನೆ. ಗುರುವಿನ ಋಣ ತೀರಿಸುವುದು ಅಸಾಧ್ಯ, ಆದರೆ ಗುರುವಿಗೆ ನಮ್ರತೆಯಿಂದ ಕೃತಜ್ಞತೆ ಸಲ್ಲಿಸಬಹುದು! ಮತ್ತು ಅದನ್ನು ಮಾಡುವ ದಿನವೇ ಗುರು ಪೂರ್ಣಿಮೆ.
ಇದನ್ನೂ ಓದಿ : ಕಾಯಕ ಯೋಗಿ ನಾಡಿನ ಶ್ರೇಷ್ಠ ಸಂತ ಪರಮ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ..
ಮಹರ್ಷಿ ವೇದವ್ಯಾಸರೂ ಗುರು ಪೂರ್ಣಿಮೆಯ ದಿನದಂದು ಜನಿಸಿದರು ಎನ್ನುವ ನಂಬಿಕೆಯಿದೆ. ಸನಾತನ ಧರ್ಮದಲ್ಲಿ, ಮಹರ್ಷಿ ವೇದ ವ್ಯಾಸರು ಮೊದಲ ಗುರು ಸ್ಥಾನವನ್ನು ಪಡೆದಿದ್ದಾರೆ. ಏಕೆಂದರೆ ಅವರು ಮಾನವ ಜನಾಂಗಕ್ಕೆ ವೇದಗಳನ್ನು ಕಲಿಸಿದವರಾಗಿದ್ದಾರೆ. ಇದಲ್ಲದೆ, ಮಹರ್ಷಿ ವೇದ ವ್ಯಾಸರು ಶ್ರೀಮದ್ ಭಾಗವತ, ಮಹಾಭಾರತ, ಬ್ರಹ್ಮಸೂತ್ರ, ಮೀಮಾಂಸಗಳನ್ನು ಹೊರತುಪಡಿಸಿ 18 ಪುರಾಣಗಳ ಕರ್ತೃ ಎಂದು ಪರಿಗಣಿಸಲಾಗಿದೆ.
ಗುರುಪೂರ್ಣಿಮೆಯ ಮಹತ್ವ
೧. ಗುರು-ಶಿಷ್ಯ ಪರಂಪರೆ (ಗುರು ಮತ್ತು ಶಿಷ್ಯ ಪರಂಪರೆ ವ್ಯವಸ್ಥೆ) ಹಿಂದೂ ಧರ್ಮ ಮತ್ತು ಭಾರತದ ಸಂಸ್ಕೃತಿಯ ಪವಿತ್ರ ಭಾಗವಾಗಿದೆ. ಗುರು ಪೂರ್ಣಿಮೆಯನ್ನು ಆಚರಿಸುವುದು ಗುರುವಿಗೆ ನಮನ ಸಲ್ಲಿಸುವ ಒಂದು ಮಾರ್ಗವಾಗಿದೆ ಮತ್ತು ಈ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸಲು ಪ್ರತಿಜ್ಞೆ ಮಾಡುತ್ತದೆ.
೨. ಗುರುಪೂರ್ಣಿಮೆಯಂದು ಗುರುತತ್ತ್ವವು ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗ ಇವುಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ೧ ಸಾವಿರ ಪಟ್ಟು ಹೆಚ್ಚಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ.
ಇದನ್ನೂ ಓದಿ : ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..
೩. ಗುರು-ಶಿಷ್ಯ ಪರಂಪರೆ’ಯು ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಆದರೆ ಕಾಲದ ಪ್ರವಾಹದಲ್ಲಿ ರಜ-ತಮಪ್ರಧಾನ ಸಂಸ್ಕೃತಿಯ ಪ್ರಭಾವದಿಂದಾಗಿ ಮಹಾನ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆಯ ನಿಮಿತ್ತದಿಂದ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಹೇಳಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದವಕಾಶ ಲಭಿಸುತ್ತದೆ.
ಉತ್ಸವವನ್ನು ಆಚರಿಸುವ ಪದ್ಧತಿ
ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ‘ಗುರುಪರಂಪರಾ ಸಿದ್ಧ್ಯರ್ಥಂ ವ್ಯಾಸಪೂಜಾಂ ಕರಿಷ್ಯೇ|’ ಎಂದು ಸಂಕಲ್ಪ ಮಾಡುತ್ತಾರೆ. ಒಂದು ಶುಭ್ರವಸ್ತ್ರವನ್ನು ಹಾಸಿ ಅದರ ಮೇಲೆ ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಗಂಧದಿಂದ ಹನ್ನೆರಡು ರೇಖೆ (ಗೆರೆ)ಗಳನ್ನು ಎಳೆಯುತ್ತಾರೆ. ಇದೇ ವ್ಯಾಸಪೀಠ. ಅನಂತರ ಬ್ರಹ್ಮ, ಪರಾತ್ಪರಶಕ್ತಿ, ವ್ಯಾಸ, ಶುಕದೇವ, ಗೌಡಪಾದ, ಗೋವಿಂದಸ್ವಾಮಿ ಮತ್ತು ಶಂಕರಾಚಾರ್ಯರನ್ನು ಈ ವ್ಯಾಸಪೀಠದ ಮೇಲೆ ಆವಾಹಿಸಿ ಅವರಿಗೆ ಷೋಡಶೋಪಚಾರ ಪೂಜೆಯನ್ನು ಮಾಡುತ್ತಾರೆ. ಈ ದಿನ, ದೀಕ್ಷಾಗುರು ಹಾಗೂ ತಂದೆ-ತಾಯಿಯರ ಪೂಜೆಯನ್ನೂ ಮಾಡುವ ಪದ್ಧತಿಯಿದೆ.
ಸಂಕಲನ :
ಶ್ರೀ ವಿನೋದ ಕಾಮತ್
ವಕ್ತಾರರು, ಸನಾತನ ಸಂಸ್ಥೆ,