ತುಳುನಾಡಿನಲ್ಲಿ ಪ್ರತಿಯೊಂದು ಆಚಾರ ವಿಚಾರಗಳು ವಿಭಿನ್ನ ಹಿನ್ನೆಲೆಯನ್ನು ಹೊಂದಿರುತ್ತದೆ. ಅದರಲ್ಲೂ ಈ ಆಟಿ ಅಥವಾ ಕರ್ಕಾಟಕ ಮಾಸದಲ್ಲಿ ಆಟಿ ಕಳೆಂಜ, ಆಟಿಕೂಟ, ಸ್ವರ್ಗಸ್ತರಾಗಿರುವ ಹಿರಿಯರಿಗೆ ಅಗೆಲು ಸೇವೆ, ಆಟಿ ಅಮಾವಾಸ್ಯೆ ಇತ್ಯಾದಿ ಆಚರಣೆಗಳನ್ನು ಮಾಡಲಾಗುತ್ತದೆ. ತುಳು ಜನರಲ್ಲಿ ಆಟಿ ತಿಂಗಳ ಅಮಾವಾಸ್ಯೆಗೆ ವಿಶೇಷ ಪ್ರಾಧಾನ್ಯತೆ ಇದೆ. ಈ ದಿನ ಹಾಲೆ ಮರ ಮರದ ಕೆತ್ತೆಯ ಕಷಾಯವನ್ನು ಕುಡಿಯುವುದು ರೂಢಿಯಲ್ಲಿದೆ.
ಹಾಲೆ ಮರ ಎಂದರೇನು?
ಹಾಲೆ ಮರ ಅಥವಾ ಹಾಲುವಾನ ಎಂಬ ಹೆಸರಿನ ಈ ಮರವನ್ನು ತುಳುವಿನಲ್ಲಿ ‘ಪಾಳೆ ಮರ’ ಎಂದು ಕರೆಯುತ್ತಾರೆ. ಕನ್ನಡದಲ್ಲಿ ‘ಏಳೆಲಗ’, ಸಂಸ್ಕೃತದಲ್ಲಿ ‘ಸಪ್ತಪರ್ಣಿ’ ಎಂಬ ಹೆಸರಿನ ಉಲ್ಲೇಖವೂ ಇದೆ. ಸಸ್ಯಶಾಸ್ತ್ರದಲ್ಲಿ ‘ಆಲ್ ಸ್ಪೋನಿಯಾ ಸ್ಕಾಲರೀಸ್’ ಎಂದು ಕರೆಯಲ್ಪಡುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ‘ಡೆವಿಲ್ ಟ್ರೀ’ ಎಂದೂ ಕರೆಯುತ್ತಾರೆ.
ಕಪ್ಪು ಹಾಗೂ ಬಿಳಿ ಬಣ್ಣ ಹೊಂದಿರುವ ಈ ಹಾಲೆ ಮರ ಸಣ್ಣ ಗಿಡದಿಂದ ಹಿಡಿದು ಬಲಿಷ್ಠವಾಗಿ ಬುಡವನ್ನು ಹೊಂದಿ ನೀಳವಾಗಿ ಬೆಳೆಯುತ್ತದೆ. ನೂರು ವರ್ಷ ದಾಟಿದ ಮರಗಳೂ ಕೆಲವೆಡೆ ಕಾಣಸಿಗುತ್ತವೆ. ಇದರ ಎಲೆ 10 ಸೆಂ.ಮೀ ಅಷ್ಟು ಉದ್ದವಾಗಿದ್ದು ನರಗಳು ಪದರದಲ್ಲಿ ಗೋಚರಿಸುತ್ತದೆ. ಈ ಮರದಲ್ಲಿ ಏಳೇಳು ಎಲೆಗಳನ್ನು ಒಳಗೊಂಡ ಗೊಂಚಲು ಇರುತ್ತದೆ.
ಇದನ್ನೂ ಓದಿ: ವಿಶ್ವದ ಟಾಪ್ 100 ಐಸ್ಕ್ರೀಮ್ ಪಟ್ಟಿಯಲ್ಲಿ ಮಂಗಳೂರು ಪಬ್ಬಾಸ್ ಐಸ್ಕ್ರೀಮ್
ಹಾಲೆ ಮರಮರವನ್ನು ಆಟಿ ಯಲ್ಲಿ ಯಾಕೆಲ್ಲಾ ಉಪಯೋಗಿಸುತ್ತಾರೆ
ಹಾಲೆ ಮರವ್ಯಾಪಕವಾಗಿ ಬೆಳೆದಿದ್ದರೂ ಇದರ ಬಳಕೆ ಮಾತ್ರ ಸ್ವಲ್ಪ ಕಡಿಮೆಯೇ. ಈ ಮರದ ಕಟ್ಟಿಗೆಯನ್ನು ತುಳು ನಾಡಿನ ಹಿರಿಯ ಜನರು ಕಟ್ಟಿಗೆಯಾಗಿ ಬಳಸುವುದು ತೀರಾ ಕಡಿಮೆ. ಮಂತ್ರ ಶಾಸ್ತ್ರದ ಪ್ರಕಾರ ಪ್ರೇತಾವಾಹನೆಗೆ ಮತ್ತು ಬಾಧಕರ್ಷಣೆಗೆ ಉಪಯೋಗಿಸ್ಪಲ್ಪಡುವ ಕೆಲವೊಂದು ವಿಕಾರ ಮೂರ್ತಿಗಳ ರಚನೆಗೆ ಬಳಸಲಾಗುತ್ತದೆ. ಹಾಗೆಯೇ ವಿಸರ್ಜನೆ ಮಾಡುವ ಕಾಷ್ಠ ಮೂರ್ತಿಗಳ ರಚನೆಯಲ್ಲೂ ಈ ಮರದ ಬಳಕೆಯಾಗುತ್ತದೆ. ಅಲ್ಲದೆ ವರ್ಷಕ್ಕೊಮ್ಮೆ ಆಟಿ ಅಮಾವಾಸ್ಯೆಯ ದಿನ ಈ ಮರದ ಕಷಾಯ ಸೇವನೆ ಬಿಟ್ಟರೆ ಬೇರೆ ಯಾವುದೇ ತರಹದಲ್ಲೂ ಮರವನ್ನು ಉಪಯೋಗಿಸಲಾಗುವುದು ಇಲ್ಲ.
ಏನಿದು ಆಟಿ ಯ ಹಾಲೆ ಮರದ ಕಷಾಯ?
ಕರ್ಕಾಟಕ ಮಾಸ ಅಥವಾ ತುಳು ಜನರ ಆಟಿ ತಿಂಗಳಲ್ಲಿ ಅಮಾವಾಸ್ಯೆ ಬರುತ್ತದೆ. ಈ ಅಮಾವಾಸ್ಯೆಯನ್ನು “ಆಟಿ ಅಮಾಸೆ” ಎಂದೇ ಕರೆಯುತ್ತಾರೆ. ಈ ದಿನ ಹಾಲೆ ಮರದ ಕಷಾಯವನ್ನು ಕುಡಿಯುವುದು ವಾಡಿಕೆ. ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುವ ಹಾಲೆ ಮರ ಆಟಿ ಅಮಾವಾಸ್ಯೆಯ ದಿನ ವಿಶೇಷ ಔಷಧೀಯ ಸತ್ವಗಳಿಂದ ಕೂಡಿರುತ್ತದೆ ಎಂಬುದು ಹಿರಿಯರ ನಂಬಿಕೆ.
ಆಟಿ ಅಮಾವಾಸ್ಯೆಯ ಹಿಂದಿನ ದಿನ ಸಂಜೆ ಈ ಹಾಲೆ ಮರವನ್ನು ಗುರುತಿಸಿ ಅದರ ಸುತ್ತಮುತ್ತ ಸ್ವಚ್ಛಗೊಳಿಸಬೇಕು. ನಂತರ ಆ ಮರದ ಸುತ್ತಲೂ ಬಿಳಿ ನೂಲನ್ನು ಕಟ್ಟಿ ಬುಡದಲ್ಲಿ ಬಿಳಿ ಕಲ್ಲೊಂದನ್ನು(ಬೊಲ್ಕಲ್) ಇಡಬೇಕು. ಏಕೆಂದರೆ ಮಾರನೆ ದಿನ ನಸುಕಿನ ಜಾವ ಮರವನ್ನು ಸುಲಭವಾಗಿ ಗುರುತಿಸಬಹುದು ಎಂಬ ಕಾರಣಕ್ಕಾಗಿ ಆಗಿರುತ್ತದೆ., ಆ ಮರದ ಎದುರು ಕೈ ಮುಗಿದು ನಾಳೆ ಆಂಟಿ ಅಮಾವಾಸ್ಯೆಯ ದಿನವಾಗಿದ್ದು ನಿನ್ನ ತೊಗಟೆಯ ತುಂಬಾ ಔಷಧ ಸತ್ಯವನ್ನು ತುಂಬಿಕೊಂಡು ನಮಗೆ ಆರೋಗ್ಯವನ್ನು ಕರುಣಿಸು ಎಂದು ಪ್ರಾರ್ಥಿಸಬೇಕು. ಮಾರನೇ ದಿನ ಅಂದರೆ ಆಟಿ ಅಮಾವಾಸ್ಯೆಯ ದಿನ ಬೆಳಿಗ್ಗೆ ಆಗುವ ಮೊದಲೇ ಮನೆಯಲ್ಲಿನ ಹಿರಿಯ ಮಕ್ಕಳು ಬರಿ ಮೈಯಲ್ಲಿ ಹೋಗಿ ಬುಡದಲ್ಲಿಟ್ಟ ಬಿಳಿ ಕಲ್ಲಿನಿಂದ ಹಾಳೆ ಮರದ ಕೆತ್ತನೆಯನ್ನು ಕೆತ್ತಿ ತರಬೇಕು. ನಂತರ ಆ ತೊಳೆಯ ಮೇಲಿನ ಪದರವನ್ನು ತೆಗೆದು ಶುಂಠಿ, ಕಾಳುಮೆಣಸು, ಅರಿಶಿನ ಸೇರಿಸಿ ಚೆನ್ನಾಗಿ ಚಚ್ಚಿ ರಸ ತೆಗೆಯಬೇಕು. ಈ ರಸಕ್ಕೆ ಬಿಳಿ ಕಲ್ಲನ್ನು ಬಿಸಿ ಮಾಡಿ ಹಾಕಬೇಕು. ಅಥವಾ ಕಬ್ಬಿಣವನ್ನು ಬಿಸಿ ಮಾಡಿ ಅದರಲ್ಲಿ ಮುಳುಗಿಸಿ ತೆಗೆಯಬಹುದು. ನಂತರ ದೇವರಿಗೆ ಅರ್ಪಣೆ ಮಾಡಿ ಮನೆಯವರೆಲ್ಲರೂ ಖಾಲಿ ಹೊಟ್ಟೆಯಲ್ಲಿ ಎರೆಡೆರಡು ಚಮಚ ಹಾಳೆ ಮರದ ಕಷಾಯವನ್ನು ಸೇವಿಸಬೇಕು. ಸಣ್ಣ ಮಕ್ಕಳಿಗೆ ಅರ್ಧ ಚಮಚ ಕಷಾಯವನ್ನು ಸೇವಿಸಲು ಕೊಟ್ಟರೆ ಸಾಕು. ಹಸುಗೂಸು ಹಾಗೂ ಗರ್ಭಿಣಿ ಸ್ತ್ರೀಯರು ಈ ಕಷಾಯವನ್ನು ಸೇವಿಸಬಾರದು.
ಯಾಕೆ ಹಾಲೆ ಮರದ ಕಷಾಯವನ್ನು ಸೇವಿಸಬೇಕು
ಆಯುರ್ವೇದ ಶಾಸ್ತ್ರದಲ್ಲಿ ಹಾಲೆ ಮರದ ಕಷಾಯವನ್ನು ರೋಗ ನಿರೋಧಕ ಹಾಗೂ ನಂಜು ನಿವಾರಕ ಶಕ್ತಿಯಿಂದ ಕೂಡಿದ ಔಷಧೀಯ ಗುಣವುಳ್ಳ ರಸವೆಂದು ಉಲ್ಲೇಖಿಸಲಾಗಿದೆ. ಅಲ್ಲದೇ ಈ ಮಳೆಗಾಲದ ಶೀತ-ಜ್ವರ-ಕೆಮ್ಮು ಸಮಸ್ಯೆ ಹಾಗೂ ಕುರುಚಲು ಮಣ್ಣಿನಲ್ಲಿರುವ ಕ್ರಿಮಿಗಳಿಂದ ಕಾಲಿನಲ್ಲಿ ಉಂಟಾಗುವ ನಂಜಿನ ಬಾಧೆಗೆ ಈ ಹಾಳೆ ಮರದ ಕಷಾಯ ದಿವ್ಯೌಷಧ. ಆಟಿ ಅಮಾವಾಸ್ಯೆಯ ದಿನ ಹಾಲೆ ಮರದ ತೊಗಟೆಯ ರಸವು ಹೊಟ್ಟೆಗೆ ಬಿದ್ದರೆ ಹೊಟ್ಟೆಯಲ್ಲಿರುವ ಜಂತು ಹುಳು, ಲಾಡಿ ಹುಳಗಳ ಬಾಧೆ ನಿವಾರಣೆಯಾಗುತ್ತದೆ.
ಆಟಿ ಅಮಾವಾಸ್ಯೆಯ ದಿನ ಹಾಲೆ ಮರದ ತೊಗಟೆಯ ಕಷಾಯ ಖಾಲಿ ಹೊಟ್ಟೆಗೆ ಕುಡಿದರೆ 366 ಬಗೆಯ ಔಷಧಿಗಳು ಮನುಷ್ಯನ ದೇಹ ಸೇರಿದಂತೆ ಎಂಬುದು ತುಳು ನಾಡಿನ ಹಿರಿಯರ ನಂಬಿಕೆ. ವೈಜ್ಞಾನಿಕವಾಗಿ ಈ ಪದ್ಧತಿಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲವಾದರೂ ಜನರ ನಂಬಿಕೆ ಮತ್ತು ಆಚಾರಗಳನ್ನು ನಾವು ಅಲ್ಲಗಳೆಯುವಂತಿಲ್ಲ. ಈ ದಿನ ಸೇವಿಸುವ ಕಷಾಯ ರೋಗ ನಿರೋಧಕ, ಕ್ರಿಮಿ ನಾಶಕ, ಉಷ್ಣಧಾತುವಾಗಿ ಶರೀರದ ಆರೋಗ್ಯವನ್ನು ಸಂಪೂರ್ಣವಾಗಿ ಕಾಪಾಡುವ ಶಕ್ತಿಯಿರುವಂತಹ ಔಷಧವಾಗಿದೆ. ಆದ್ದರಿಂದ ಅಮಾವಾಸ್ಯೆಯ ನಸುಕಿನ ಜಾವ ಹಾಲೆ ಮರದ ಬದಲು ಇತರ ವಿಷಕಾರಿ ಮರಗಳ ತೊಗಟೆಯ ಕಷಾಯವನ್ನು ಸೇವಿಸಿ ಯಾರೂ ಜೀವಕ್ಕೆ ಆಪತ್ತು ತಂದುಕೊಳ್ಳದಿರಿ. ಮನೆಯಲ್ಲಿ ಈ ಮರದ ಪರಿಚಯವಿರುವವರು ಮಾತ್ರ ಮರದ ತೊಗಟೆಯನ್ನು ತರುವುದು ಒಳ್ಳೆಯದು. ಸಂಪ್ರದಾಯದ ಹೆಸರಲ್ಲಿ ಎಚ್ಚರ ತಪ್ಪಿದರೆ ಬದುಕಿನುದ್ದಕ್ಕೂ ಪಶ್ಚಾತಾಪ ಪಡಬೇಕಾದೀತು.. ಜೋಕೆ…!!!!