ಮಳೆಗಾಲ ಶುರುವಾಯಿತೆಂದರೆ ಡೆಂಗ್ಯೂ, ಮಲೇರಿಯಾದಂತಹ ಜ್ವರಗಳು ಮನುಷ್ಯರನ್ನು ಬಾಧಿಸುತ್ತಲೇ ಇರುತ್ತದೆ. ಅಪಾಯಕಾರಿ ಸೊಳ್ಳೆಗಳ ಉತ್ಪತ್ತಿಯಿಂದ ಹರಡುವ ಈ ಖಾಯಿಲೆಗಳು ನೂರಾರು ಜೀವಗಳನ್ನು ಬಲಿ ಪಡೆಯುತ್ತವೆ. ಆದ್ದರಿಂದ ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೇಬೇಕು.
ಏನಿದು ಡೆಂಗ್ಯೂ ಜ್ವರ?
ಡೆಂಗ್ಯೂ ಜ್ವರ ಫ್ಲೂನಂತಹ ಖಾಯಿಲೆ. ಹಾಗೂ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಡೆಂಗ್ಯೂ ವೈರಾಣುವಿನಿಂದ ಬರುವ ಈ ರೋಗ ಸೊಳ್ಳೆಗಳ ಮೂಲಕ ಹರಡುತ್ತದೆ. ಹಗಲು ವೇಳೆ ಕಚ್ಚುವ ಈಡಿಸ್ ಎಂಬ ಹೆಣ್ಣು ಸೊಳ್ಳೆಗಳಿಂದ ಡೆಂಗ್ಯೂ ವೈರಾಣುಗಳು ಹರಡುತ್ತದೆ. ರೋಗದ ಲಕ್ಷಣಗಳನ್ನು ತಿಳಿಯಲು ಐದಾರು ದಿನ ಬೇಕಾಗುತ್ತದೆ. ಒಮ್ಮೊಮ್ಮೆ ಆರೇಳು ದಿನ ಕಳೆದರೂ ರಕ್ತ ಪರೀಕ್ಷೆಯಲ್ಲಿ ಡೆಂಗ್ಯೂ ಜ್ವರವೆಂದು ದೃಢ ಪಡುವುದಿಲ್ಲ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ತರಲು ಕೆಲವು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಆ ಮಾರ್ಗಸೂಚಿಗಳನ್ನು ನಾಗರಿಕರಾದ ನಾವು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದರೆ ಡೆಂಗ್ಯೂಯಂತಹ ಮಾರಕ ವೈರಾಣುಗಳಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ಸಾಧ್ಯ.
ಡೆಂಗ್ಯೂಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ.?
೧.ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
೨.ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು
೩.ವಾರಕ್ಕೊಮ್ಮೆ ಕೂಲರ್ ಗಳನ್ನು ಶುಚಿಗೊಳಿಸಬೇಕು.
೪.ವಾಟರ್ ಟ್ಯಾಂಕ್/ಕಂಟೈನರ್ ಗಳ ಮುಚ್ಚಳಗಳನ್ನು ಬಿಗಿಯಾಗಿ ಹಾಕಬೇಕು.
೫.ಮನೆಯ ಬಾಗಿಲು ಕಿಟಕಿಗಳನ್ನು ಅನಗತ್ಯವಾಗಿ ತೆರೆದಿಡಬಾರದು. ಕಿಟಕಿಗಳಿಗೆ ಮೆಷ್ ಅಥವಾ ಪರದೆಗಳನ್ನು ಅಳವಡಿಸಬೇಕು.
೬. ಮಲಗುವ ವೇಳೆ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸುವುದು ಅತ್ಯಗತ್ಯ.
೭.ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ದೇಹ ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆ ಧರಿಸಬೇಕು.
೮.ಸೊಳ್ಳೆ ಕಚ್ಚದಂತೆ ಕ್ರೀಮ್, ಕಾಯಿಲ್, ಎಣ್ಣೆಗಳನ್ನು ಬಳಸಿ.
೯.ಒಂದು ವೇಳೆ ಜ್ವರವಿದ್ದರೆ ಕಡೆಗಣಿಸದೆ ವೈದ್ಯರ ಸಲಹೆ ಪಡೆಯಿರಿ. ಅತೀ ಹೆಚ್ಚು ನೀರು ಕುಡಿಯಿರಿ.