ಇತ್ತೀಚೆಗೆ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಚ್ಚ ಅಕ್ರಮಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕಾನೂನು ತರಲು ಮುಂದಾಗಿದ್ದು, ಇದಕ್ಕೆ ರಾಜ್ಯಪಾಲರ ಒಪ್ಪಿಗೆ ಕೂಡ ಸಿಕ್ಕಿದೆ. ಅದರಂತೆ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದರೆ ಭಾರಿ ಮೊತ್ತದ ದಂಡ ವಿಧಿಸಬೇಕಾಗುತ್ತದೆ.., ಇದರ ಜೊತೆಗೆ ಜೈಲು ಸೇರುವುದು 10 ವರ್ಷಗಳವರೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕು ಎಂದು ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ಸಲ್ಲಿಸಿದ ಪ್ರಶ್ನೆ, ಉತ್ತರಗಳಿಂದ ತೃಪ್ತರಾದಂತಿರುವ ರಾಜ್ಯಪಾಲ ತಾವರ್ಚಂದ್ ಗೆಹ್ಲೊಟ್ ಅವರು ಮೂರು ವಿಧೇಯಕಗಳಿಗೆ ಒಪ್ಪಿಗೆ ನೀಡಿ ಅಂಕಿತ ಹಾಕಿದ್ದಾರೆ.
ನಾನಾ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸುವವರಿಗೆ 10 ಕೋಟಿ ರೂಪಾಯಿ ವರೆಗೆ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸಾರ್ವಜನಿಕ (ಪರೀಕ್ಷಾ ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ-2023’ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಈ ವಿಧೇಯಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೆಲವು ವಿವರಣೆಗಳನ್ನು ಕೇಳಿ ಕಡತಗಳನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಸರ್ಕಾರ ಇದಕ್ಕೆ ಸೂಕ್ತ ವಿವರಣೆಗಳನ್ನು ನೀಡಿ ಮತ್ತೆ ರಾಜ್ಯಪಾಲರಿಗೆ ಕಳುಹಿಸಿತ್ತು.
ಇನ್ನು ಮುಂದೆ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗೆ ಸಿಕ್ಕಿಬಿದ್ದವರು ಕೋಟಿಗಟ್ಟಲೆ ರುಪಾಯಿ ದಂಡ ಕಟ್ಟಬೇಕಲ್ಲದೆ, ಹತ್ತು ವರ್ಷ ಜೈಲಿಗೂ ಹೋಗಬೇಕಾಗುತ್ತದೆ. ಈ ಹೊಸ ಕಾನೂನಿಗೆ ರಾಜ್ಯಪಾಲರ ಅಂಕಿತ ಬಿದ್ದಿರುವುದರಿಂದ ಶೀಘ್ರವೇ ರಾಜ್ಯದಲ್ಲಿ ಜಾರಿಯಾಗಲಿದೆ. ರಾಜ್ಯದಲ್ಲಿ ಹಿಂದಿನ ವರ್ಷಗಳಲ್ಲಿ ನಡೆದಿದ್ದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಭಾರಿ ಅಕ್ರಮಗಳು ನಡೆದಿದ್ದವು. ಪಿ ಎಸ್ ಐ ಪರೀಕ್ಷೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳಲ್ಲೂ ಅಕ್ರಮ ನಡೆದಿದ್ದವು. ಹೀಗಾಗಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ವಿಧೇಯಕದ ಮುಖ್ಯ ಅಂಶಗಳು
- ಪರೀಕ್ಷೆಯಲ್ಲಿ ನಕಲು ಮಾಡುವುದು, ಪ್ರಶ್ನೆ ಪತ್ರಿಕೆಗಳ ಸೋರಿಕೆ, ಉತ್ತರ ಪತ್ರಿಕೆ ಮತ್ತು ಒಎಂಆರ್ ಹಾಳೆಗಳನ್ನು ತಿದ್ದುವುದು, ಲಿಖಿತ ಅಥವಾ ವಿದ್ಯುನ್ಮಾನ ಅಥವಾ ಯಾಂತ್ರಿಕೃತ ಸಾಧನ/ ಉಪಕರಣ ಬಳಸುವುದು, ಪರೀಕ್ಷಾ ಕೇಂದ್ರದ ಒಳಗೆ ಅಕ್ರಮ ಪ್ರವೇಶ, ಅನಧಿಕೃತ ಸ್ಥಳಗಳಲ್ಲಿ ಪರೀಕ್ಷೆ ಬರೆಸುವುದು ಸೇರಿದಂತೆ ಯಾವುದೇ ಬಗೆಯ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವುದನ್ನು ಶಿಕ್ಷಾರ್ಹ ಅಪರಾಧ ಎಂದು ಈ ವಿಧೇಯಕ ಘೋಷಿಸಿದೆ.
- ನಕಲು ಅಥವಾ ಹೊರಗಿನಿಂದ ಸಹಾಯ ಪಡೆದು ಪರೀಕ್ಷಾ ಅಕ್ರಮ ಎಸಗುವ ಅಭ್ಯರ್ಥಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ ದಂಡ ವಿಧಿಸುವ ಪ್ರಸ್ತಾವವನ್ನು ಸೆಕ್ಷನ್10(1) ಒಳಗೊಂಡಿದೆ.
- ಅಭ್ಯರ್ಥಿಯೂ ಸೇರಿದಂತೆ ಯಾವುದೇ ವ್ಯಕ್ತಿ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಪ್ರಯತ್ನಿಸುವುದು, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು, ಸೋರಿಕೆಗೆ ಪ್ರಯತ್ನಿಸುವುದು, ಅಕ್ರಮವಾಗಿ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು, ಅಕ್ರಮವಾಗಿ ಉತ್ತರ ಬರೆಯುವುದು ಅಥವಾ ಬರೆಯಲು ನೆರವಾಗುವುದು, ನೆರವು ಕೋರುವುದು ಸೇರಿದಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರೀಕ್ಷಾ ಅಕ್ರಮಕ್ಕೆ ನೆರವು ನೀಡುವವರಿಗೆ ಎಂಟರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 15 ಲಕ್ಷ ರೂ ನಿಂದ 10 ಕೋಟಿ ರೂಪಾಯಿವರೆಗೂ ದಂಡ ವಿಧಿಸುವ ಪ್ರಸ್ತಾವ ಸೆಕ್ಷನ್ 10(2)ರಲ್ಲಿದೆ.
- ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಅಭ್ಯರ್ಥಿಗಳು ಮುಂದಿನ ಎರಡು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಪರೀಕ್ಷೆಯನ್ನು ತೆಗೆದುಕೊಳ್ಳದಂತೆ ಅನರ್ಹಗೊಳಿಸುವ ಪ್ರಸ್ತಾವವು ಸೆಕ್ಷನ್ 11(2) ರಲ್ಲಿದೆ.
- ಈ ಯಾವುದೇ ಸಂಸ್ಥೆ ಅಥವಾ ಅದರ ಆಡಳಿತ ಮಂಡಳಿಯೂ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದರೆ ಆ ಪರೀಕ್ಷೆಯ ಸಂಪೂರ್ಣ ವೆಚ್ಚವನ್ನು ಅಂತಹ ಸಂಸ್ಥೆ ಅಥವಾ ಆಡಳಿತ ಮಂಡಳಿಯಿಂದಲೇ ವಸೂಲಿ ಮಾಡಲು ಸೆಕ್ಷನ್ 13ರಲ್ಲಿ ಅವಕಾಶ ಕಲ್ಪಿಸಲಿದೆ.