ಚುನಾವಣೆ ಎಂಬುದು ಪ್ರಜಾಪ್ರಭುತ್ವ ರಾಷ್ಟ್ರದ ಬಹುದೊಡ್ಡ ಹಬ್ಬ. ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ ನಾಯಕನನ್ನು ತಾನೇ ಮತ ಹಾಕಿ ಆರಿಸಲು ಇರುವ ಅತ್ಯುತ್ತಮ ಅವಕಾಶವೇ ಮತದಾನ. ಸಂವಿಧಾನ ವ್ಯವಸ್ಥೆಯಲ್ಲಿ ಅತ್ಯಂತ ಶ್ರೇಷ್ಠದಾನವೆಂದರೆ ಮತದಾನ ಎಂದು ಹೆಮ್ಮೆಯಿಂದ ಹೇಳುವ ಪ್ರಜೆಗಳೂ ಇದ್ದಾರೆ. ಯಾಕೆಂದರೆ ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅವಶ್ಯಕ ಮಾಧ್ಯಮ. ಪ್ರಜೆಗಳಾದವರು ಮತ ಚಲಾಯಿಸಿ ತಮ್ಮ ದೇಶದ ಆಡಳಿತ ನಾಯಕರನ್ನು ತಾವೇ ಚುನಾಯಿಸಿ ಗೆಲ್ಲಿಸಿದರೆ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ.
ನಮ್ಮ ದೇಶದಲ್ಲಿ ಮತದಾನ ಎಂಬುದು ಆಗಾಗ ನಡೆಯುತ್ತಲೇ ಇರುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಪ್ರಧಾನಿ ರಾಷ್ಟ್ರಪತಿ ಚುನಾವಣೆವರೆಗೂ ಮತದಾನ ನಡೆಯುತ್ತದೆ. ಇದು ಏಕಕಾಲದಲ್ಲಿ ನಡೆಯುವಂತಹುದಲ್ಲ. ಈ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಕೆಲಸ, ಮತ ಪ್ರಚಾರ ಅಥವಾ ಇತರೆ ಮತದಾನ ಜಾಗೃತಿ ಕಾರ್ಯಕ್ರಮಗಳಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ. ಈ ಖರ್ಚು ವೆಚ್ಚಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಒಂದು ದೇಶ ಒಂದು ಚುನಾವಣೆ ಎಂಬ ವಿಧೇಯಕಕ್ಕೆ ಅನುಮೋದನೆ ನೀಡುತ್ತಿದೆ.
ದೇಶಕ್ಕೆ ಕೋಟ್ಯಂತರ ರೂಪಾಯಿಗಳ ಉಳಿತಾಯ ಮತ್ತು ಆಡಳಿತ ದಕ್ಷತೆ ಹೆಚ್ಚಿಸಲು ನೆರವಾಗಬಲ್ಲ, ದೇಶಾದ್ಯಂತ ಒಂದು ದೇಶ ಒಂದು ಚುನಾವಣೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆಯನ್ನು ನೀಡಲಾಗಿದೆ. ಇದಕ್ಕೆ ಅಂಗ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಎಸ್ ಕೂಡ ಬೆಂಬಲ ನೀಡಿದೆ. ಮಾಜಿ ರಾಷ್ಟ್ರಪತಿ ಪ್ರಮಾಣಾತ ಕೋವಿಂದ್ ಅವರ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಸಂಪುಟ ಸಭೆ ಒಪ್ಪಿಕೊಂಡಿದೆ. 2029ರ ವೇಳೆಗೆ ಎರಡು ಹಂತಗಳಲ್ಲಿ ಇದನ್ನು ಜಾರಿಗೆ ತರುವ ಉದ್ದೇಶವಿದೆ. ದೇಶದಲ್ಲಿ ಏಕೆ ಕಾಲಕ್ಕೆ ಚುನಾವಣೆ ನಡೆಸುವುದರಿಂದ ಸಮಯ ಮತ್ತು ವೆಚ್ಚದ ಅಗಾಧ ಉಳಿತಾಯವಾಗಲಿದೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ವ್ಯವಸ್ಥೆಯಲ್ಲಿರುವ ಹಲವಾರು ಅಡೆತಡೆಗಳನ್ನು ಕಡಿಮೆ ಮಾಡಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಏನಿದು ಎರಡು ಹಂತಗಳ ಶಿಫಾರಸ್ಸು?
ಮಾಜಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಸಮಿತಿಯು ಈ ಒಂದು ದೇಶ ಒಂದು ಚುನಾವಣೆಯನ್ನು ಎರಡು ಹಂತಗಳಲ್ಲಿ ಜಾರಿಗೆ ತರಲು ಶಿಫಾರಸು ಮಾಡಿದೆ. ಮೊದಲನೆಯದು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಹಾಗೂ ಎರಡನೆಯದು ಸಾರ್ವತ್ರಿಕ ಚುನಾವಣೆ ಮುಗಿದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಾಗಿದೆ. ಜೊತೆಗೆ ಕೇಂದ್ರ ಸರ್ಕಾರವು ಈ ಶಿಫಾರಸ್ಸುಗಳನ್ನು ಜಾರಿ ಮಾಡುವ ಸಲುವಾಗಿ ಅನುಷ್ಠಾನ ಕಮಿಟಿ ರಚಿಸಲು ನಿರ್ಧರಿಸಿದೆ. ಈ ಎರಡು ಹಂತಗಳ ಚುನಾವಣೆಗೆ ಒಂದೇ ಮತದಾರರ ಚೀಟಿ ಇರಲಿದೆ.
ಈಗ ಕೋವಿಂದ್ ವರದಿಯನ್ನು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರವು ಜಾರಿಗೂ ಮುನ್ನ ದೇಶಾದ್ಯಂತ ವಿವರವಾದ ಚರ್ಚೆಗಳನ್ನು ನಡೆಸಲಿದೆ. ಅಲ್ಲದೆ, ಅನುಷ್ಠಾನ ಕಮಿಟಿ ಒಂದನ್ನು ದೇಶದ ಬಹುತೇಕ ಪಕ್ಷಗಳು ಈ ಒಂದು ದೇಶ ಒಂದು ಚುನಾವಣೆಯನ್ನು ಒಪ್ಪಿಕೊಂಡಿವೆ. ಮುಂದಿನ ದಿನಗಳಲ್ಲಿ ಎಲ್ಲರ ನಡುವೆ ಸಮನ್ವಯತೆ ತರುವ ನಡೆಸಲಾಗುತ್ತದೆ.
ರಮಾನಾಥ್ ಕೋವಿಂದ್ ಸಮಿತಿಯು ಮಾಡಿರುವ ಶಿಫಾರಸುಗಳೇನು?
- ಸಂಸತ್ತು ಸೇರಿದಾಗ ಈ ಒಂದು ದೇಶ ಒಂದು ಚುನಾವಣೆಯನ್ನು ಜಾರಿಗೆ ತರಲು ನಿಗದಿತ ದಿನಾಂಕವನ್ನು ನಿಗದಿ ಮಾಡಬೇಕು. ಈ ದಿನಾಂಕ ನಿಗದಿ ಬಳಿಕ ರಾಜ್ಯಗಳಿಗೆ ನಡೆಯುವ ಚುನಾವಣೆಗಳ ವಿಧಾನಸಭೆಗಳ ಅವಧಿ 2029 ರವರೆಗೆ ಮಾತ್ರ ಇರಲಿದೆ.
- 2024 ರಿಂದ 2028 ರ ವರೆಗೆ ನಡೆಯುವ ಎಲ್ಲಾ ವಿಧಾನಸಭೆ ಚುನಾವಣೆಗಳ ಅವಧಿ 2029 ರ ಲೋಕಸಭೆ ಚುನಾವಣೆವರೆಗೆ ಅಲ್ಪಾವಧಿಯನ್ನು ಹೊಂದಿರುತ್ತವೆ. ಆಗ ಸ್ವಯಂ ಚಾಲಿತವಾಗಿ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆ ಚುನಾವಣೆಗಳು ನಡೆಯಲಿದೆ.
- 2025ರಲ್ಲಿ ಚುನಾವಣೆ ನಡೆಸುವ ರಾಜ್ಯವು ನಾಲ್ಕು ವರ್ಷಗಳ ಅವಧಿಯ ಸರ್ಕಾರವನ್ನು ಹೊಂದಿರುತ್ತದೆ. 2027ರಲ್ಲಿ ರಚನೆಯಾಗುವ ವಿಧಾನಸಭೆಯು 2029 ರವರೆಗೆ ಕೇವಲ ಎರಡು ವರ್ಷಗಳ ಕಾಲ ಸರ್ಕಾರವನ್ನು ಹೊಂದಿರುತ್ತದೆ.
- ಅತಂತ್ರ ವಿಧಾನಸಭೆ, ಅವಿಶ್ವಾಸ ಗೊತ್ತುವಳಿ ಅಥವಾ ಅಂತಹ ಯಾವುದೇ ಘಟನೆಯ ಸಂದರ್ಭದಲ್ಲಿ, ಹೊಸ ಸದನವನ್ನು ರಚಿಸಲು ಹೊಸ ಚುನಾವಣೆಗಳನ್ನು ನಡೆಸಬಹುದು.
- ಮಧ್ಯಂತರದಲ್ಲಿ ಚುನಾವಣೆ ನಡೆದರೂ ಅದು ಮುಂದಿನ ಲೋಕಸಭೆ ಚುನಾವಣೆವರೆಗೆ ಮಾತ್ರ ಇರಲಿದೆ. ಬಳಿಕ ಸದನ ವಿಸರ್ಜನೆಯಾಗಿ ಹೊಸದಾಗಿ ಚುನಾವಣೆ ನಡೆಯಲಿದೆ.
- ಸಮಿತಿಯು 18 ಸಾಂವಿಧಾನಿಕ ತಿದ್ದುಪಡಿಗಳಿಗಾಗಿ ಶಿಫಾರಸ್ಸು ಮಾಡಿದೆ ಇವುಗಳಲ್ಲಿ ಹೆಚ್ಚಿನವುಗಳಿಗೆ ರಾಜ್ಯ ವಿಧಾನಸಭೆಗಳ ಅನುಮೋದನೆ ಅಗತ್ಯವಿಲ್ಲ. ಕೆಲವಕ್ಕೆ ಸಾಂವಿಧಾನಿಕ ತಿದ್ದುಪಡಿ ಬೇಕಾಗುತ್ತದೆ.
- ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಕೆಲವು ಪ್ರಸ್ತಾವಿಕ ಬದಲಾವಣೆಗಳಿಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಅನುಮೋದನೆಯ ಅಗತ್ಯವಿದೆ.
- ಪ್ರತ್ಯೇಕವಾಗಿ ಕಾನೂನು ಆಯೋಗವು ಏಕಕಾಲದಲ್ಲಿ ಚುನಾವಣೆಗಳ ಬಗ್ಗೆ ತನ್ನದೇ ಆದ ವರದಿಯನ್ನು ಶೀಘ್ರದಲ್ಲೇ ಹೊರ ತರುವ ಸಾಧ್ಯತೆ ಇದೆ.
- ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ 2029 ರಿಂದ ಏಕಕಾಲದಲ್ಲಿ ಚುನಾವಣೆ ನಡೆಸಲು ಅತಂತ್ರ ವಿಧಾನಸಭೆಯಂತಹ ಪ್ರಕರಣಗಳಲ್ಲಿ ಏಕತೆಯ ಸರ್ಕಾರಕ್ಕೆ ಅವಕಾಶ ನೀಡುವಂತೆ ಕಾನೂನು ಆಯೋಗವು ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.