ನಮ್ಮ ದೇಶದ ಅತ್ಯಂತ ಜನಪ್ರಿಯ ದೇವರುಗಳಲ್ಲಿ ಒಬ್ಬನಾದ ಗಣೇಶನಿಗೆ ಸಮರ್ಪಿತ ಹಬ್ಬವಾದ ಗಣೇಶ ಚತುರ್ಥಿಯ ಆಚರಣೆಯು ಆರಂಭವಾಗಿದೆ. ಪುಟ್ಟ ಗುಡಿಸಲಿನಿಂದ ಹಿಡಿದು ದೇಶ ವ್ಯಾಪ್ತಿಯಾಗಿ ಇಂದು ಗಣೇಶ ಪೂಜಿಸಲ್ಪಡುತ್ತಿದ್ದಾನೆ. ಗಣೇಶನ ಈ ಆರಾಧನೆಯ ಸಂಭ್ರಮ ಮುಗಿಲು ಮುಟ್ಟಿದೆ. ಆದರೆ ದೇಶದ ಗಡಿಗಳನ್ನು ಮೀರಿದ ಕೆಲವೇ ಕೆಲವು ದೇವರುಗಳಲ್ಲಿ ಗಣಪನೂ ಒಬ್ಬ. ವಿಶ್ವದ ವಿವಿಧಡೆ ಗೌರಿ ಪುತ್ರನನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಅಲ್ಲಿ ಗಣಪತಿಯ ಕುರಿತ ನಂಬಿಕೆ, ಗಣಪನ ಆರಾಧನೆ ಹೇಗಿದೆ ಎಂಬುದರ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ.
ಥೈಲ್ಯಾಂಡ್ ನಲ್ಲಿ ಬೌದ್ಧರ ಪಾಲಿಗೂ ಪೂಜ್ಯ
ಆನೆಯ ತಲೆಯ ದೇವನನ್ನು ಪೂರ್ವ ಮತ್ತು ಆತ್ಮೀಯ ಏಷ್ಯಾದ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಬಹುದು. ಥೈಲ್ಯಾಂಡ್ ಕೂಡ ಭಾರತದಂತೆಯೇ ಗಣೇಶ ಚತುರ್ಥಿಯನ್ನು ಆಚರಿಸುತ್ತದೆ. ಗಣೇಶ ಥಾಯ್ ಬೌದ್ಧರ ಪಾಲಿಗೂ ಪೂಜ್ಯ. ಗಣೇಶ ಶಿಲ್ಪಗಳು ಸಾಮಾನ್ಯ ಯುಗ 550-600 ರ ಅವಧಿಯಲ್ಲಿ ಥೈಲ್ಯಾಂಡ್ ಗೆ ಬಂದವು. ಅಲ್ಲಿ ಫಿರಾ ಫಿಕಾನೆಟ್ ಎಂದು ಕರೆಯಲ್ಪಡುವ ಗಣಪನನ್ನು ಯಶಸ್ಸಿನ ಸಂಕೇತ ಮತ್ತು ವಿಘ್ನ ವಿನಾಶಕ ಎಂದು ಪರಿಗಣಿಸಲಾಗಿದೆ. ಹೊಸ ವ್ಯಾಪಾರ ವ್ಯವಹಾರ ಪ್ರಾರಂಭಿಸುವ ಮೊದಲು ಮದುವೆಯಂತಹ ಶುಭ ಕಾರ್ಯಗಳ ಸಂದರ್ಭದಲ್ಲಿ ಗಜಮುಖನನ್ನು ಪೂಜಿಸಲಾಗುತ್ತದೆ. ಈ ದೇವತೆಯ ಪ್ರಭಾವವನ್ನು ಥಾಯ್ ಕಲೆ ಮತ್ತು ವಾಸ್ತುಶಿಲ್ಪದಲ್ಲೂ ಕಾಣಬಹುದು.
ಟಿಬೆಟ್ ಬೌದ್ಧ ದೇವತೆ
ವಿಶೇಷವೆಂದರೆ, ಗಣಪತಿ ಟಿಬೆಟ್ ನಲ್ಲಿ ಬೌದ್ಧ ದೇವತೆಯಾಗಿ ಪೂಜಿಸಲ್ಪಡುತ್ತಾನೆ. ಗಣೇಶ, ಮಹಾ ರಕ್ತ ಗಣಪತಿ ಮತ್ತು ವಜ್ರ ವಿನಾಯಕ ನಂತಹ ವಿವಿಧ ರೂಪಗಳನ್ನು ಹೊಂದಿದ್ದಾನೆ. ವರದಿಯೊಂದರ ಪ್ರಕಾರ, ಭಾರತೀಯ ಬೌದ್ಧ ಧಾರ್ಮಿಕ ನಾಯಕರಾದ ಅತಿಸಾ ದೀಪಾಂಕರ ಶ್ರೀಜ್ನಾ ಮತ್ತು ಗಾಯಧರರು ವಿನಾಯಕನನ್ನು ಕ್ರಿ.ಶ 11ನೇ ಶತಮಾನದಲ್ಲಿ ಟಿಬೆಟಿಯನ್ ಬೌದ್ಧ ಧರ್ಮಕ್ಕೆ ಪರಿಚಯಿಸಿದರು. ಟಿಬೆಟಿಯನ್ ಪುರಾಣ ಗಣೇಶನನ್ನು, ಟಿಬೆಟ್ ಮತ್ತು ಮಂಗೋಲಿಯಾದಲ್ಲಿ ಹುಟ್ಟಿದ ಬೌದ್ಧ ಧರ್ಮದ ಒಂದು ರೂಪವಾದ ಲಾಮಾಯಿಸಂ ಎನ್ನುತ್ತದೆ. ಆತ ಬೌದ್ಧ ಧರ್ಮದ ರಕ್ಷಕ, ದುಷ್ಟತನವನ್ನು ನಾಶಪಡಿಸುವ, ಅಡೆತಡೆಗಳನ್ನು ನಿವಾರಿಸುವ ದೇವತೆ ಎನ್ನುತ್ತದೆ. ಅಲ್ಲಿ, ಗಣಪನಲ್ಲಿ ಆನೆಗೆ ಸಂಬಂಧಿತ ಗುಣಲಕ್ಷಣಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಇತರ ಟಿಬೆಟಿಯನ್ ದೇವತೆಗಳಂತೆಯೇ, ಕೋಪದ ಅಭಿವ್ಯಕ್ತಿ ಮತ್ತು ಗಾಢ ಬಣ್ಣಗಳು (ಕೆಂಪು, ಕಪ್ಪು,ಕಂದು) ಅಲ್ಲಿ ಸಾಮಾನ್ಯ ಎಂದು ಟಿಬೆಟ್, ಚೀನಾ ಮತ್ತು ಜಪಾನ್ ನಲ್ಲಿ ಗಣೇಶನ ಬಗ್ಗೆ ಸಂಶೋಧನೆ ಮಾಡಿದ ಬೆಲ್ಜಿಯಂ ಇಂಜಿನಿಯರ್ ಮತ್ತು ಜಪಾನಿನ ವಿಜ್ಞಾನಿ ಲೋಡ್ ರೋಸ್ಸೀಲ್ ಹೇಳುತ್ತಾರೆ.
ಕಾಂಬೋಡಿಯಾದಲ್ಲಿ ಆದಿಪೂಜಿತ
ಆಗ್ನೇಯ ಏಷ್ಯಾಕ್ಕೆ ಗಣಪನ ಆಗಮನ ಹೇಗಾಯಿತು ಎಂಬುದು ಇನ್ನೂ ಅಸ್ಪಷ್ಟ. ಆದರೆ ಆ ಭಾಗದ ದೇಶಗಳಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ರಾಬರ್ಟ್ ಎಲ್ ಬ್ರೌನ್ ಅವರ ಕೃತಿಯ ಪ್ರಕಾರ ಆಗ್ನೇಯ ಏಷ್ಯಾದಲ್ಲಿ ಐದನೇ ಮತ್ತು ಆರನೇ ಶತಮಾನದಷ್ಟು ಹಿಂದೆಯೇ ಗಣೇಶನ ಶಾಸನಗಳು ಮತ್ತು ಚಿತ್ರಗಳಿದ್ದವು. ಕಾಂಬೋಡಿಯಾದಲ್ಲಿ ಗಣೇಶನೇ ಆದಿ ಪೂಜಿತ ಮತ್ತು 7ನೇ ಶತಮಾನದಿಂದ ದೇವಾಲಯಗಳಲ್ಲಿ ಪೂಜಿಸಲ್ಪಡುತ್ತಿದ್ದ. ಗಣಪ ತನ್ನ ಭಕ್ತರಿಗೆ ಮೋಕ್ಷವನ್ನು ಕರುಣಿಸುತ್ತಾನೆ ಎಂದು ನಂಬಲಾಗಿದೆ.
ಜಪಾನ್ ನಲ್ಲಿ ಅವಳಿ ರೂಪ
ಬೌದ್ಧ ಧರ್ಮದ ಜೊತೆಗೆ, ಗಣೇಶ ಭಾರತದಿಂದ ಟಿಬೆಟ್ ಮತ್ತು ಚೀನಾದ ಮೂಲಕ ಜಪಾನ್ ಗೆ ತಲುಪಿರಬಹುದು ಎನ್ನಲಾಗುತ್ತದೆ. ಇಲ್ಲಿ ಕಾಂಗಿಟೆನ್ ಎಂದು ಕರೆಯಲ್ಪಡುವ ಗಣಪ ಜಪಾನಿನ ಬೌದ್ಧ ಧರ್ಮದೊಂದಿಗೆ ಸಂಬಂಧ ಹೊಂದಿದ್ದಾನೆ. ಇಲ್ಲಿ ವ್ಯಾಪಾರಿಗಳು, ನಟರು ಮತ್ತು ಗೀಶಾಗಳು ಗಣಪನನ್ನು ಪೂಜಿಸುತ್ತಾರೆ. ಗಜಮುಖ ಜಪಾನ್ ನಲ್ಲಿ ವಿಶಿಷ್ಟವಾದ ಅವಳಿ ರೂಪವಾಗಿ ಕಂಡುಬರುತ್ತಾನೆ, ಅಂದರೆ ಗಂಡು ಮತ್ತು ಹೆಣ್ಣು ಪ್ರತಿಮೆಗಳು ಜೊತೆಗಿವೆ. ಎಂಬ್ರೇಸಿಂಗ್ ಕಾಂಗಿಟೆನ್ ಎಂದು ಜನಪ್ರಿಯವಾಗಿರುವ ಈ ರೂಪ, ಆನೆಯ ಸೌಮ್ಯ ಮತ್ತು ಬಲಶಾಲಿ ಸ್ವಭಾವಕ್ಕೆ ಒತ್ತು ನೀಡುತ್ತದೆ. ಇಲ್ಲಿನ ಗಣಪ ಭಾಗಶಃ ಬಟ್ಟೆ ಧರಿಸಿದ್ದು, ರೇಷ್ಮೆಯ ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ಚರ್ಮ ಹೊಂದಿದ್ದಾನೆ. ಈ ರೂಪ ಶಕ್ತಿ ಮತ್ತು ಹಿಂಸೆ ಗಿಂತ ಹೆಚ್ಚಾಗಿ, ಉತ್ಸಾಹ ಮತ್ತು ಒಳ್ಳೆಯತನದ ಮೂಲಕ ಸಮೃದ್ಧಿಯನ್ನು ಸೂಚಿಸುತ್ತದೆ. ಜಪಾನಿನಲ್ಲಿ ಗಣೇಶನ ಇತರ ಆವೃತ್ತಿಗಳೂ ಇವೆ.
ಚೀನಾದವರಿಗೆ ಗಣೇಶನೇ ವಿಘ್ನ
ಚೀನಾದಲ್ಲಿ ಇವೆಲ್ಲವುಗಳಿಗಿಂತ ಭಿನ್ನವಾಗಿ, ಗಣೇಶನನ್ನು ಕಾಡ ತಾಂತ್ರಿಕ ರೂಪದಲ್ಲಿ ಕಾಣಬಹುದು. ಅವನನ್ನು ಹುವಾನ್ಕ್ಸಿಟಿಯಾನ್ ಎಂದು ಅವನನ್ನು ದೊಡ್ಡ ಅಡ್ಡಿ ಎಂಬಂತೆ ಚಿತ್ರಿಸಲಾಗಿದೆ.
ಆಫ್ಘಾನ್ ನಲ್ಲಿ ಗರ್ದೆಜ್ ಗಣೇಶ
ಇನ್ನು ಸಾಮಾನ್ಯ ಯುಗ 6 ಮತ್ತು 7ನೇ ಶತಮಾನದಲ್ಲಿ ಕೆತ್ತಲಾದ ಜನಪ್ರಿಯ ಗಣೇಶನ ಶಿಲ್ಪವು ಅಫ್ಘಾನಿಸ್ತಾನದ ಕಾಬುಲ್ ಬಳಿಯ ಗರ್ದೆಜ್ ಗಣೇಶ ಎಂದು ಕರೆಯಲ್ಪಡುವ ಆತನನ್ನು ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರಾಗಿ ಪೂಜಿಸಲಾಗುತ್ತದೆ.
ಇಂಡೋನೇಷ್ಯಾದಲ್ಲಿ ತಾಂತ್ರಿಕ ದೈವ
ಇಂಡೋನೇಷ್ಯಾದ ಜಾವ ದ್ವೀಪದಲ್ಲಿ, ಮಾಂತ್ರಿಕವಾಗಿ ಒಡ್ಡಲಾಗಿರುವ ಅಡೆತಡೆಗಳನ್ನು ನಿವಾರಿಸುವ ತಾಂತ್ರಿಕ ದೇವನಾಗಿ ಗಣೇಶನನ್ನು ಕಾಣಬಹುದು. ಸಾ.ಶ. 14ನೇ-15ನೇ ಶತಮಾನಗಳಲ್ಲಿ ಇಲ್ಲಿ ಬೆಳೆದ ತಾಂತ್ರಿಕ ಬೌದ್ಧಧರ್ಮ ಮತ್ತು ಶೈವ ಧರ್ಮದ ಮಿಶ್ರಣವಾಗಿ ಗಣಪ ಮೂಡಿ ಬಂದಿದ್ದಾನೆ. ಇಲ್ಲಿ, ತಲೆಬುರುಡೆಗಳನ್ನು ಧರಿಸಿ ತಲೆಬುರುಡೆಗಳ ಸಿಂಹಾಸನದ ಮೇಲೆ ಕುಳಿತಿರುವಂತೆ ಗಣೇಶನನ್ನು ಚಿತ್ರಿಸಲಾಗಿದೆ. ಗಣೇಶನ ಹಿಂದೂ ಆವೃತ್ತಿ ಜಾವಾದಲ್ಲಿ ಕಂಡುಬರುತ್ತದೆ. ಪೂರ್ವ ಜಾವಾದ ಟೆಂಗರ್ ಸೆಮೆರು ರಾಷ್ಟ್ರೀಯ ಉದ್ಯಾನವನದ ಮೌಂಟ್ ಬ್ರೊಮೊದ ಜ್ವಾಲಾಮುಖಿಯ ಬಾಯಿಯಲ್ಲಿ 700 ವರ್ಷಗಳಷ್ಟು ಹಳೆಯದಾದ ಗಣೇಶನ ವಿಗ್ರಹವಿದೆ. ಬ್ರಹ್ಮನಿಂದಾಗಿ ಪರ್ವತಕ್ಕೆ ಬ್ರೋಮೊ ಎಂಬ ಹೆಸರು ಬಂದಿದೆ. ಈ ಪರ್ವತ ಇಂಡೋನೇಷ್ಯಾದ 120ಕ್ಕೂ ಹೆಚ್ಚು ಜೀವಂತ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ಗಜಮುಖನ ವಿಗ್ರಹ ತಮ್ಮನ್ನು ಸಕ್ರಿಯ ಜ್ವಾಲಾಮುಖಿಯಿಂದ ರಕ್ಷಿಸುತ್ತದೆ ಎಂದು ಸ್ಥಳೀಯರು ನಂಬುತ್ತಾರೆ.