ಬಿಬಿಎಂಪಿ ಕಚೇರಿಗೆ ಹೋಗದೆ ಕಟ್ಟಡ ನಕ್ಷೆ ಪಡೆಯುವ “ನಂಬಿಕೆ ನಕ್ಷೆ- ನಿಮ್ಮ ಮನೆ ನಕ್ಷೆ ನಿಮ್ಮ ಮನೆ ಬಾಗಿಲಿಗೆ” ಯೋಜನೆಯ ಪ್ರಾಯೋಗಿಕ ಅನುಷ್ಠಾನ ಎರಡು ವಲಯಗಳಲ್ಲಿ ಯಶಸ್ವಿಯಾಗಿದ್ದು, ಸೆಪ್ಟೆಂಬರ್ 2 ರಿಂದ ಎಲ್ಲಾ ವಲಯಗಳಲ್ಲೂ ಜಾರಿಯಾಗಲಿದೆ.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಜಾರಿಗೆ ತಂದಿರುವ ಈ ಯೋಜನೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾರ್ಚ್ ತಿಂಗಳಲ್ಲಿ ಚಾಲನೆ ನೀಡಿದ್ದರು. ರಾಜ ರಾಜೇಶ್ವರಿ ನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಪ್ರಾಯೋಗಿಕ ಅವಧಿಯಲ್ಲಿ ಒಟ್ಟಾರೆ 302 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 148 ನಕ್ಷೆಗಳಿಗೆ ಅನುಮೋದನೆ ದೊರೆತಿದೆ.
ಸೆಪ್ಟೆಂಬರ್ 2 ರಿಂದ ಇಡೀ ಬಿಬಿಎಂಪಿ ವ್ಯಾಪ್ತಿಯಲ್ಲಿ ನಂಬಿಕೆ ನಕ್ಷೆಗ ಯೋಜನೆ ಜಾರಿಯಾಗಿದೆ. ‘ನಿಮ್ಮ ಮನೆ ನಕ್ಷೆ ನಿಮ್ಮ ಮನೆ ಬಾಗಿಲಿಗೆ’ ಎಂಬ ಘೋಷವಾಕ್ಯದೊಂದಿಗೆ ಜನರಿಗೆ ಸಿಗಲಿದ್ದು, ಬಿಬಿಎಂಪಿಯಿಂದ ನಕ್ಷೆ ಪಡೆಯಲು ವಿಳಂಬವಾಗುವುದಿಲ್ಲ.
ಎಂಜಿನಿಯರ್ ಗಳಿಗೆ ಅನುಮತಿ
ನಂಬಿಕೆ ನಕ್ಷೆ ಯೋಜನೆಯಲ್ಲಿ ನಕ್ಷೆ ಅನುಮೋದನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ, ದಾಖಲೆಗಳ ಪ್ರಾಥಮಿಕ ಪರಿಶೀಲನೆ ನಡೆಸಲು ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಇಂಜಿನಿಯರ್ ಗಳು, ಆರ್ಕಿಟೆಕ್ಸ್ ಗಳ ವಿವರವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅವರ ಮೂಲಕ ನಾಗರಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಕ್ಷೆ ಮಂಜೂರಾದ ಮೇಲೆ ಶುಲ್ಕವನ್ನೂ ಆನ್ಲೈನ್ನಲ್ಲೇ ಪಾವತಿಸಬೇಕಾಗುತ್ತದೆ. ನಂತರ ನಕ್ಷೆ ಲಭ್ಯವಾಗುತ್ತದೆ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.
ಅಪ್ಲೋಡ್ ಆದ ದಾಖಲೆಗಳನ್ನು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಆನ್ಲೈನ್ ನಲ್ಲೇ ಕಟ್ಟಡವು ಕೆರೆ, ರಾಜ ಕಾಲುವೆ ಮತ್ತಿತರ ಬಫರ್ ಝೋನ್ ನಲ್ಲಿ ಬರುವುದೇ ಎಂದು ಪರಿಶೀಲಿಸಿ ಆಟೋ ಡಿಸಿಆರ್ ಮೂಲಕ ಎರಡು ದಿನದಲ್ಲಿ ತಾತ್ಕಾಲಿಕ ನಕ್ಷೆ ನೀಡುತ್ತಾರೆ.
ಕಂದಾಯ ಅಧಿಕಾರಿಗಳು, ನಗರ ಯೋಜನೆ ಅಧಿಕಾರಿಗಳು ತಾತ್ಕಾಲಿಕ ನಕ್ಷೆ ಪರಿಶೀಲಿಸಿ ಸರಿ ಇದ್ದರೆ ಕಾಯಂ ನಕ್ಷೆಯಾಗಿ ಮಂಜೂರು ಮಾಡುತ್ತಾರೆ. ತಪ್ಪಾಗಿದ್ದರೆ ತಿದ್ದುತ್ತಾರೆ. ಕಟ್ಟಡ ಕಟ್ಟದಂತೆ ನಿರ್ಬಂಧ ಹೇರುತ್ತದೆ. ಎಲ್ಲವೂ 15 ದಿನಗಳಲ್ಲಿ ಮುಗಿಯುತ್ತದೆ.