ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಕೇಂದ್ರ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಜಿಎನ್ಎಸ್ಎಸ್ ಹೊಂದಿದ ಖಾಸಗಿ ವಾಹನಗಳ ಮಾಲೀಕರಿಗೆ ದಿನಕ್ಕೆ 20 ಕಿಲೋಮೀಟರ್ವರೆಗೆ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ ವೇಗಳಲ್ಲಿ ಪ್ರಯಾಣಿಸಲು ಯಾವುದೇ ಮೊತ್ತವನ್ನು ವಿಧಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಫಾಸ್ಟ್ಯಾಗ್ ವ್ಯವಸ್ಥೆಯ ಜೊತೆಗೆ ಹೊಸದಾಗಿ ಟೋಲ್ ವ್ಯವಸ್ಥೆಯೊಂದನ್ನು ಕೇಂದ್ರ ಹೊರ ತಂದಿದ್ದು, ಜಿಎನ್ಎಸ್ಒಬಿಯುಗಳನ್ನು ಹೊಂದಿರುವ ವಾಹನಗಳು ಪ್ರಯಾಣಿಸುವ ದೂರವನ್ನು ಆಧರಿಸಿ ಸ್ವಯಂ ಚಾಲಿತವಾಗಿ ತೋಳ್ಗಳನ್ನು ಪಾವತಿಸಲು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ. ಇದರಿಂದ ಪ್ರಯಾಣಿಕರ ಟೋಲ್ ಖರ್ಚು ಕಡಿಮೆಯಾಗುವುದರ ಜೊತೆಗೆ ಸಮಯವನ್ನು ಉಳಿಸಲಾಗುತ್ತದೆ. ಜಿಎನ್ಎಸ್ಎಸ್ ಸಾಧನಗಳನ್ನು ಹೊಂದಿರುವ ವಾಹನಗಳಿಗೆ ಟೋಲ್ ಪ್ಲಾಜಾಗಳಲ್ಲಿ ವಿಶೇಷ ಲೇನ್ ಗಳನ್ನು ರಚಿಸುವ ಮೂಲಕ 2008ರ ನಿಯಮಗಳ ನಿಯಮ 6 ಅನ್ನು ಬದಲಾಯಿಸಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಧಾರ ಮತ್ತು ಸಂಗ್ರಹಣೆ) ನಿಯಮಗಳು, 2008 ಅನ್ನು ತಿದ್ದುಪಡಿ ಮಾಡಿದೆ. 2024ರ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಧಾರ ಮತ್ತು ಸಂಗ್ರಹಣೆ) ತಿದ್ದುಪಡಿಯ ಹೊಸ ನಿಯಮಗಳ ಅನ್ವಯ, ಪ್ರಯಾಣಮಿತಿ 20 ಕಿಲೋಮೀಟರ್ ಮೀರಿದ ಪ್ರಯಾಣಕ್ಕಷ್ಟೇ ಶುಲ್ಕ ವಿಧಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಒಂದೇ ವಿಭಾಗ, ಶಾಶ್ವತ ಸೇತುವೆ, ಬೈಪಾಸ್ ಅಥವಾ ಸುರಂಗವನ್ನು ಬಳಸುವ ರಾಷ್ಟ್ರೀಯ ಪರವಾನಗಿ ವಾಹನವನ್ನು ಹೊರತುಪಡಿಸಿ ಯಾಂತ್ರಿ ಕವಾಹನದ ಚಾಲಕ, ಮಾಲೀಕರು ಅಥವಾ ವ್ಯಕ್ತಿಗೆ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ ಆಧಾರಿತ ಬಳಕೆದಾರ ಶುಲ್ಕ ಸಂಗ್ರಹ ವ್ಯವಸ್ಥೆಯಲ್ಲಿ ಒಂದು ದಿನದಲ್ಲಿ ಪ್ರತಿ ದಿಕ್ಕಿನಲ್ಲಿ 20 ಕಿಲೋಮೀಟರ್ ಪ್ರಯಾಣದವರೆಗೆ ಶೂನ್ಯ ಬಲಕೆದಾರ ಶುಲ್ಕವನ್ನು ವಿಧಿಸಲಾಗುತ್ತದೆ.