ಯುರೋಪ್ ಮತ್ತು ರಷ್ಯಾದ ಅತ್ಯುನ್ನತ ಶಿಖರವಾದ ಮೌಂಟ್ ಎಲ್ಬ್ರಸ್ ಮೇಲೆ ಭಾರತೀಯದ್ವಜವನ್ನು ಹಾರಿಸುವ ಮೂಲಕ ಕೊಡಗಿನ ಪರ್ವತಾರೋಹಿ ಮಹಿಳೆಯೊಬ್ಬರು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.
ಮೂಲತಃ ಕೊಡಗು ಜಿಲ್ಲೆಯ ಗೋಣಿಕೊಪ್ಪದವರಾದ ಪ್ರೀತ್ ಅಪ್ಪಯ್ಯ ಅವರೇ ಈ ಸಾಧನೆಯನ್ನು ಮಾಡಿದ ಛಲಗಾತಿ ಹೆಣ್ಣುಮಗಳು.
5642 ಮೀಟರ್ ಎತ್ತರದ ಶಿಖರ
ತಮ್ಮ ಅಸಾಧಾರಣ ಪರ್ವತಾರೋಹಣ ಕೌಶಲ್ಯ ಮತ್ತು ದೇಶಭಕ್ತಿಯ ಮನೋಭಾವವನ್ನು ಪ್ರದರ್ಶಿಸುವ ಮೂಲಕ ಪ್ರೀತ್ ಅಪ್ಪಯ್ಯ ಅವರು 5642 ಮೀಟರ್ ಎತ್ತರದ ಶಿಖರವನ್ನು ಯಶಸ್ವಿಯಾಗಿ ಏರುವುದರೊಂದಿಗೆ, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸವಿನೆನಪಿಗಾಗಿ ಅಲ್ಲಿ ನಮ್ಮ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.
ಪರ್ವತಾರೋಹಣದ ಇತಿಹಾಸದಲ್ಲಿ ಇದು ಆಕೆಯ ಎರಡನೆಯ ಸಾಧನೆಯಾಗಿದ್ದು, 2023 ರಲ್ಲಿ ಅವರು 5895 ಮೀಟರ್ (19,340 ಅಡಿ) ಎತ್ತರವಿರುವ ಆಫ್ರಿಕಾದ ಅತಿ ಎತ್ತರದ ಪರ್ವತ ಶಿಖರವಾದ ಮೌಂಟ್ ಕಿಲಿಮಂಜಾರೊವನ್ನು ಏರಿದ್ದರು.
ಇನ್ನೂ ಓದಿ : ಅನಕ್ಷರಸ್ಥ ಗ್ರಾಮ ಪಂಚಾಯತ್ ಸದಸ್ಯರಿಗೆ ಅಕ್ಷರ ಕಲಿಸುವ “ಸಾಕ್ಷರ ಸಮ್ಮಾನ್” ಯೋಜನೆ
ಪ್ರಸಕ್ತ ಮೈಸೂರಿನ ಬನ್ನಿಮಂಟಪದಲ್ಲಿ ನೆಲೆಸಿರುವ ಪ್ರೀತ್ ಅಪ್ಪಯ್ಯ, ಆಗಸ್ಟ್ 9ರಂದು 11 ಮಂದಿ ಸದಸ್ಯರೊಂದಿಗೆ ಮೈಸೂರಿನಿಂದ ಹೊರಟು ಮರುದಿನ ರಷ್ಯಾಕ್ಕೆ ತಲುಪಿದ್ದರು. ಆಗಸ್ಟ್ 11ರಂದು ಅವರು 4,120 ಮೀಟರ್ ಎತ್ತರದ ಮಾಲಿಬ್ಡಿನಂ ಪರ್ವತವನ್ನು ಏರುವ ಚಾರಣವನ್ನು ಆರಂಭಿಸಿದರು ಈ ಚಾರಣದ ನಂತರ ಅವರು ಎಲ್ಬ್ರೆಸ್ ಗ್ರಾಮಕ್ಕೆ ತೆರಳಿದರು. ಮತ್ತು ಪಾಸ್ತುಖೋವ್ ರಾಕ್ಸ್ ನಲ್ಲಿ ಎರಡು ದಿನಗಳನ್ನು ಕಳೆದರು.
ಮೌಂಟ್ ಎಲ್ಬ್ರಸ್ ಅನ್ನು ಏರುವ ನಿರ್ಣಾಯಕ ಆರೋಹಣವು ಆಗಸ್ಟ್ 16ರ ಮಧ್ಯರಾತ್ರಿ ಆರಂಭಗೊಂಡು ಆಗಸ್ಟ್ 15ರ ಬೆಳಿಗ್ಗೆ ಏಳು ಇಪ್ಪತ್ತಕ್ಕೆ ಅಂದರೆ 7 ಗಂಟೆ 20 ನಿಮಿಷದಲ್ಲಿ ನಿಗದಿತ ಗುರಿ ತಲುಪುವ ಮೂಲಕ ಅಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಕೊನೆಗೊಂಡಿತು.
ಗೋಣಿಕೊಪ್ಪದ ವಕೀಲ ಜಮ್ಮಡ ಎಂ ಅಣ್ಣಯ್ಯ ಅವರ ಪತ್ನಿಯಾಗಿರುವ ಪ್ರೀತ್ ಅವರು, ದಿ. ಕುಞಿಯಂಡ ಅಪ್ಪಯ್ಯ ಮತ್ತು ಗೌರಮ್ಮ ದಂಪತಿಯ ಪುತ್ರಿ ಯಾಗಿದ್ದು ಪ್ರಥಮ್ ಪೂಣಚ್ಚ ಹಾಗೂ ಆರ್ಯನ್ ಕುಟ್ಟಪ್ಪ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ ಇವರ ಸಹೋದರ ಕುಞಿಯಂಡ ಮಾಚಯ್ಯ ಅವರು ವನ್ಯಜೀವ ಛಾಯಾಗ್ರಾಹಕರಾಗಿದ್ದಾರೆ.