ವಿದ್ಯುತ್ ಎಲ್ಲಾ ಮನೆಗಳಿಗೂ ಅತ್ಯವಶ್ಯಕವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಈಗಿನ ಕರ್ನಾಟಕ ಸರ್ಕಾರವು ತಮ್ಮ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ಯೋಜನೆಯಂತೆ ನಿಗದಿತ ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ನಿಗದಿತ ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆಯಾದರೆ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ. ಇನ್ನು ಮುಂದೆ ಪ್ರತೀ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡದೇ ಹೋದರೆ ವಿದ್ಯುತ್ ಕಡಿತಗೊಳಿಸುವ ಹೊಸ ನಿಯಮವನ್ನು ಜಾರಿಗೊಳಿಸುವುದಾಗಿ ಬೆಸ್ಕಾಂ ಸೂಚನೆ ನೀಡಿದೆ.
ವಿದ್ಯುತ್ ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ನಿರ್ಧರಿಸಿದೆ. ಸೆಪ್ಟೆಂಬರ್ 1 ರಿಂದ ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಲು ನಿರ್ಧರಿಸಿರುವ ಬೆಸ್ಕಾಂ- ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್ಮೆಂಟ್ ಗಳು ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಮೀಟರ್ ರೀಡಿಂಗ್ ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸಬೇಕೆಂದು ಬೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್ ಮಾಪನ ಮಾಡಿದ ಬಳಿಕ, ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಲೈನ್ ಮ್ಯಾನ್ ಗಳ ಜೊತೆ ಮಾಪಕ ಓದುಗರು ಮತ್ತೆ ಅದೇ ಸ್ಥಳಕ್ಕೆ ತೆರಳುತ್ತಿದ್ದರು. ಇನ್ನು ಮುಂದೆ ಮಾಪಕ ಓದುಗರೊಂದಿಗೆ ಇರುವ ಲೈನ್ ಮ್ಯಾನ್ ಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸರಬರಾಜುನ್ನು ಬಿಲ್ ನೀಡುವ ಸಮಯದಲ್ಲೇ ಸ್ಥಗಿತಗೊಳಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿದ್ಯುತ್ ಬಿಲ್ ಪಾವತಿಗೆ ಅಂತಿಮ ದಿನಾಂಕದವರೆಗೆ (ಅಂದರೆ ಬಿಲ್ ನೀಡಿದ 15 ದಿನಗಳು) ಯಾವುದೇ ಬಡ್ಡಿ ಇಲ್ಲದೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ದಿನಾಂಕದ ನಂತರವೂ ಬಡ್ಡಿ ಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದಾಗಿಯೂ ಗ್ರಾಹಕರು ಬಿಲ್ ಪಾವತಿಸದಿದ್ದಲ್ಲಿ ಮುಂದಿನ ಮೀಟರ್ ರೀಡಿಂಗ್ ದಿನವೇ ಸಂಪರ್ಕ ಕಡಿತಗೊಳಿಸಲಾಗುತ್ತದೆ. ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ನೂರು ರೂಪಾಯಿ ಗಳಿಗಿಂತ ಅಧಿಕವಾಗಿದ್ದಲ್ಲಿ ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.
ಗ್ರಾಹಕರಿಗೆ ವಿಶೇಷ ಸೂಚನೆ
ಆನ್ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಿದ ಸಂದರ್ಭದಲ್ಲಿ ಕೆಲವೊಮ್ಮೆ ಬೆಸ್ಕಾಂ ಸಾಫ್ಟ್ವೇರ್ ನಲ್ಲಿ ವಿವರ ನಮೂದಾಗದೇ ಇದ್ದಾಗ ಬಾಕಿ ತೋರಿಸುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಡಿತಕ್ಕೆ ಮುಂದಾದರೆ, ಸಿಬ್ಬಂದಿಗೆ ಬಿಲ್ ರಸೀದಿ ತೋರಿಸುವುದರಿಂದ ವಿದ್ಯುತ್ ಕಡಿತ ಮಾಡಲಾಗುವುದಿಲ್ಲ. ಹಾಗಾಗಿ, ನಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಿ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.