Union Budget 2024 : ಸರ್ಕಾರದ 9 ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ದೊಡ್ಡ ಸಹಾಯ ದೊರೆಯಲಿದೆ. ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ಈ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಗರಿಷ್ಠ ಮೊತ್ತ 15 ಸಾವಿರ ರೂ. ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟವರು ಈ ಭತ್ಯೆ ಪಡೆಯಲಿದ್ದಾರೆ. ಅರ್ಹತೆಯ ಮಿತಿಯು ತಿಂಗಳಿಗೆ 1 ಲಕ್ಷ ರೂ. ಇದರಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ.
ಉದ್ಯೋಗ, ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ ₹2 ಸಾವಿರ ಕೋಟಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಭಾರತದ ಆರ್ಥಿಕತೆಯ ಬೆಳವಣಿಗೆಯು ಅತ್ಯುತ್ತಮವಾಗಿ ಮುಂದುವರಿದಿದೆ. ಭಾರತದ ಹಣದುಬ್ಬರವು ಸ್ಥಿರವಾಗಿದೆ, 4% ಗುರಿಯತ್ತ ಸಾಗುತ್ತಿದೆ. ಬಡವರು, ಯುವಕರು, ಮಹಿಳೆಯರು, ರೈತರಂತಹ ಪ್ರಮುಖ ವರ್ಗಗಳನ್ನು ಕೇಂದ್ರೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ. ಉದ್ಯೋಗ, ಕೌಶಲ್ಯ, ಎಂಎಸ್ಎಂಇ, ಮಧ್ಯಮ ವರ್ಗದವರಿಗೆ ನಿರಂತರ ಗಮನ ನೀಡಲಾಗುತ್ತಿದೆ. ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ಸಂಬಂಧಿಸಿದ 5 ಯೋಜನೆಗಳಿಗೆ 2 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಹೇಳಿದರು.