ಮನುಷ್ಯನ ಜೀವನಕ್ಕೆ ಪ್ರಸ್ತುತ ವಿದ್ಯುತ್ ಶಕ್ತಿಯು ಅತ್ಯವಶ್ಯಕವಾಗಿ ಬೇಕಾಗಿದೆ. ನಿತ್ಯ ಜೀವನದಲ್ಲಿ ಹೆಚ್ಚಿನ ಕೆಲಸಗಳು ವಿದ್ಯುತ್ ಶಕ್ತಿಯನ್ನೇ ಅವಲಂಬಿಸಿದೆ. ವಿದ್ಯುತ್ ಇಲ್ಲವಾದರೆ ಪ್ರತಿ ಮನೆಯವರು ರಾತ್ರಿಯನ್ನು ಕತ್ತಲಲ್ಲೇ ಕಳೆಯಬೇಕಾದ ಪರಿಸ್ಥಿತಿ ಇದೆ. ಹಾಗೆಯೇ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳಾದ ಮಿಕ್ಸಿ, ಗ್ರೈಂಡರ್, ಫ್ರಿಡ್ಜ್, ಫ್ಯಾನ್ ಎಲ್ಲವೂ ವಿದ್ಯುತ್ನಿಂದಲೇ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ವಿದ್ಯುತ್ ಶಕ್ತಿ ಮನುಷ್ಯನ ಜೀವನಕ್ಕೆ ಅತ್ಯಗತ್ಯ ಶಕ್ತಿಯ ಮೂಲವಾಗಿದೆ. ಹಿಂದಿನ ಕಾಲದಿಂದಲೂ ನೀರನ್ನು ಯಥೇಚ್ಛವಾಗಿ ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿದತ್ತವಾಗಿರುವಂತಹ ಸೂರ್ಯನ ಶಾಖವನ್ನು ಬಳಸಿ ಸೌರ ಫಲಕಗಳ ಮೂಲಕ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ. ಈ ಸೌರ ಶಕ್ತಿಯಿಂದ ತಯಾರಾಗುವ ವಿದ್ಯುತ್ತನ್ನು ಪ್ರತೀ ಮನೆಯವರೂ ತಮ್ಮ ಸ್ವ ಉಪಯೋಗಕ್ಕೆ ಬಳಸಿಕೊಳ್ಳಬಹುದು. ಇದು ಮನುಷ್ಯರ ಜೀವನದ ಆರ್ಥಿಕ ಹೊರೆಯನ್ನು ಸ್ವಲ್ಪಮಟ್ಟಿಗೆ ನಿರಾಳಗೊಳಿಸುವುದಂತು ನಿಜ. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರ ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವಂತಹ “ಪ್ರಧಾನಮಂತ್ರಿ ಸೂರ್ಯ ಘರ್” ಎಂಬ ಯೋಜನೆಯನ್ನು ಸಹ ಅನುಷ್ಠಾನಗೊಳಿಸುತ್ತಿದೆ.
ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಪ್ರತೀ ಮನೆಯನ್ನು ಇಂಧನ ಸ್ವಾವಲಂಬಿಯಾಗಿಸುವುದರ ಜೊತೆಗೆ ನವೀಕರಿಸಬಹುದಾದ ಇಂಧನ ಮೂಲಗಳ ಪೈಕಿ ಪ್ರಮುಖವಾಗಿರುವ ಸೌರ ಶಕ್ತಿ ಬಳಕೆಗೆ ಉತ್ತೇಜನ ನೀಡುವುದೂ ಯೋಜನೆಯ ಗುರಿಯಾಗಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಯೋಜನೆ ಮೂಲಕ ಜಿಲ್ಲೆಗೊಂದು ಮಾದರಿ ಸೌರ ಗ್ರಾಮ ರೂಪಿಸುವ ಕನಸು ಬಿತ್ತಿದೆ. ಆ ಮೂಲಕ ಗ್ರಾಮೀಣ ಸಮುದಾಯಗಳು ತಮ್ಮ ಇಂಧನ ಅಗತ್ಯಗಳನ್ನು ಪೂರೈಸಿಕೊಂಡು ಸ್ವಾವಲಂಬಿಗಳಾಗುವ ಹೆಬ್ಬಾಗಿಲನ್ನು ತೆರೆದಿಟ್ಟಿದೆ. ಈ ಯೋಜನೆಯ ಕುರಿತಾತ ಕಿರು ಮಾಹಿತಿ ಇಲ್ಲಿದೆ
ಏನಿದು ಮಾದರಿ ಸೌರ ಗ್ರಾಮ?
ಯಾವುದೇ ಒಂದು ಗ್ರಾಮದಲ್ಲಿ 5000 ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೆ ಆ ಗ್ರಾಮ ಸೌರ ಗ್ರಾಮ ಯೋಜನೆಯ ಲಾಭ ಪಡೆಯಲು ಅರ್ಹವಾಗಿರುತ್ತದೆ. ಜಿಲ್ಲಾ ಮಟ್ಟದ ಸಮಿತಿಯು ಈ ಗ್ರಾಮವನ್ನು ಆಯ್ಕೆ ಮಾಡುತ್ತದೆ. ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯು ಮಾದರಿ ಸೌರ ಗ್ರಾಮ ಅನುಷ್ಠಾನ ಏಜೆನ್ಸಿ (ಎಮ್.ಎಸ್.ವಿ.ಐ.ಎ) ಆಗಿ ಕಾರ್ಯ ನಿರ್ವಹಿಸುತ್ತದೆ.
ನವೀಕರಿಸಬಹುದಾದ ಇಂಧನ ಘಟಕಗಳ ಅಳವಡಿಕೆ ಸಂಬಂಧ ಆಯಾ ಗ್ರಾಮ ಪಂಚಾಯಿತಿಯು ಮೌಲ್ಯಮಾಪನ ನಡೆಸುತ್ತದೆ. ಶಕ್ತಿಯ ಬಳಕೆ ಮನೆ ಮನೆಗೂ ತಲುಪಿದೆಯೇ ಎಂಬುದರ ಕುರಿತು ಅವಲೋಕನ ನಡೆಸುತ್ತದೆ.
1,00,00,000 ರೂಪಾಯಿ ಅನ್ನು ಸೌರ ಗ್ರಾಮಕ್ಕೆ ಕೇಂದ್ರ ಸರ್ಕಾರವು ಅನುದಾನವಾಗಿ ನೀಡುವ ಮೊತ್ತವಾಗಿದೆ. ಈ ಅನುದಾನದ ಮೊತ್ತವನ್ನು ಗ್ರಾಮಗಳಲ್ಲಿ ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆಗೆ ಬಳಸಿಕೊಳ್ಳಬೇಕು. 2024 25 ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರವು 800 ಕೋಟಿ ರೂಪಾಯಿ ಹಣವನ್ನು ಮಾದರಿ ಸೌರ ಗ್ರಾಮ ಯೋಜನೆಗಾಗಿ ಮೀಸಲಿಟ್ಟಿದೆ.
ಮಾದರಿ ಸೌರ ಗ್ರಾಮ ಯೋಜನೆಯು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಂತೆಯೇ ಆದರೂ ಅದಕ್ಕಿಂತ ಸ್ವಲ್ಪ ಭಿನ್ನವಾದ ಯೋಜನೆಯಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯು ದೇಶದ ಒಂದು ಕೋಟಿ ಮನೆಗಳ ಮೇಲ್ಚಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಗುರಿ ಹೊಂದಿದೆ. ಬಡ ಮತ್ತು ಮಧ್ಯಮ ವರ್ಗಗಳಲ್ಲಿ ವಿದ್ಯುತ್ ಬಿಲ್ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಸೌರ ಫಲಕ ಅಳವಡಿಕೆಗಾಗಿ ಕೇಂದ್ರ ಸರ್ಕಾರವು ಸಬ್ಸಿಡಿ ನೀಡುತ್ತದೆ. ಅಗತ್ಯವಿದ್ದಲ್ಲಿ ಸಾಲ ಸೌಲಭ್ಯವನ್ನೂ ನೀಡುತ್ತದೆ. ಸೌರ ಫಲಕ ಅಳವಡಿಸಿದರೆ ಮಾಸಿಕ 300 ಯುನಿಟ್ ತನಕ ಉಚಿತ ವಿದ್ಯುತ್ ಪಡೆಯಬಹುದು. ಇದರಿಂದ ವಾರ್ಷಿಕವಾಗಿ ವಿದ್ಯುತ್ ಬಿಲ್ ಅಲ್ಲಿ 18000 ರೂಪಾಯಿ ಉಳಿತಾಯವಾಗುತ್ತದೆ. ಇದಕ್ಕಾಗಿ 75,021 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಮಾದರಿ ಸೌರ ಗ್ರಾಮ ಯೋಜನೆ ಅಥವಾ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಯಾವುದೇ ಆದರೂ ಬಡವರ ಬದುಕಿನ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಯೋಜನೆಯಾಗಿರಲಿ. ಪ್ರಸ್ತುತ ದಿನಗಳಲ್ಲಿ ವಿದ್ಯುತ್ ದರ ದಿನೇ ದಿನೇ ಗಗನಕ್ಕೇರುತ್ತಿದೆ. ಪ್ರತಿಯೊಂದು ವಸ್ತುವಿನ ಬೆಲೆಯೂ ದುಬಾರಿಯಾಗುತ್ತಲೇ ಇದೆ. ಆದ್ದರಿಂದ ಸೌರಫಲಕಗಳ ಅಳವಡಿಕೆಗೆ ಸರಕಾರದ ಯೋಜನೆಗಳನ್ನು, ಸಬ್ಸಿಡಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಗೆ ಮುಂದಾಗಬೇಕು. ಇದರಿಂದ ಬಿಸಿಲಿರುವ ಸಮಯದಲ್ಲಿ ಉಚಿತವಾಗಿ ವಿದ್ಯುತ್ ಬಳಸಿಕೊಂಡು ಜೀವನ ನಡೆಸಬಹುದು. ಜನೋಪಯೋಗಿ ಯೋಜನೆಯಾಗಿ ಜನರ ಬದುಕನ್ನು ಬೆಳಗುವ ಯೋಜನೆಯಾಗಲಿ.