ಕರಾವಳಿ ಎಂದರೆ ತೆಂಗು-ಅಡಿಕೆ ಕೃಷಿಯ ತವರೂರು. ಕರಾವಳಿಯ ಪ್ರದೇಶಗಳಲ್ಲಿ ಸಂಚರಿಸುತ್ತಾ ಹೋದರೆ ಎಲ್ಲಿ ನೋಡಿದರೂ ಸಾಲು ಸಾಲು ಅಡಿಕೆ ಗಿಡಗಳೇ ಕಾಣಸಿಗುತ್ತದೆ. ಇಲ್ಲಿಯ ಜನರು ಈ ಅಡಿಕೆ ಕೃಷಿಯಿಂದಲೇ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಆದರೆ ಅತಿವೃಷ್ಟಿ ಅನಾವೃಷ್ಟಿಯಿಂದ ಎದುರಾಗುವ ಕೊಳೆ ರೋಗ ಬದಲಾದ ಸಮಸ್ಯೆಗಳು ಇಲ್ಲಿನ ಜನರಿಗೆ ಬಹುದೊಡ್ಡ ಸವಾಲಾಗಿರುತ್ತದೆ. ಅಡಿಕೆ ಧಾರಣೆ ಕುಸಿದರೆ ಈ ಪ್ರದೇಶದ ಎಷ್ಟು ಸಾವಿರ ಜನರ ಬದುಕೇ ಕುಸಿದಂತೆ. ಆದರೆ ಅಡಿಕೆ ಸಿಪ್ಪೆಯಿಂದ ತಯಾರಿಸಲ್ಪಡುವ ಸಾಬೂನಿಗೆ ಕೇಂದ್ರ ಸರ್ಕಾರವು ಪೇಟೆಂಟ್ ನೀಡಿರುವುದು ಇಲ್ಲಿನ ಅಡಿಕೆ ಕೃಷಿಕರ ಬದುಕಿಗೆ ಹೊಸ ಚೈತನ್ಯ ತುಂಬಿದಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಧಾರಣೆ ಮತ್ತು ಮಾರುಕಟ್ಟೆ ಹಾಗೂ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ವ್ಯಾಜ್ಯ ಸುಪ್ರೀಂಕೋರ್ಟಿನಲ್ಲಿರುವುದರಿಂದ ಅಡಿಕೆ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ. ಆದರೆ ಅಡಿಕೆ ಸಿಪ್ಪೆಯಿಂದ ತಯಾರಿಸಿದ ಕೋಕೋ ರೇಖಾ ಸ್ನಾನದ ಸಾಬೂನಿಗೆ ಭಾರತ ಸರ್ಕಾರದಿಂದ ಪೇಟೆಂಟ್ ಅಥವಾ ಹಕ್ಕುಸ್ವಾಮ್ಯ ಲಭಿಸಿದೆ.
ಹೌದು ಅಡಿಕೆಯಿಂದ ಕಾಫಿ ಹುಡಿ, ಫಿನೈಲ್, ಹೋಲಿಗೆಂತಹ ಸಾಮಗ್ರಿಗಳನ್ನು ತಯಾರಿಸುವ ಬಗ್ಗೆ ಕೇಳಿದ್ದೇವೆ. ಈಗ ಅಡಿಕೆ ಸಿಪ್ಪೆಯಿಂದ ತಯಾರಿಸುವ ಸಾಬೂನಿಗೆ ಮಾರುಕಟ್ಟೆಗೆ ಬರಲು ಕೇಂದ್ರ ಸರ್ಕಾರವೇ ಹಕ್ಕು ಸ್ವಾಮ್ಯ ನೀಡಿರುವುದು ಸಂತಸದ ವಿಚಾರ. ಅಡಿಕೆಯು ಕ್ಯಾನ್ಸರ್ ಕಾರಕ ಅಲ್ಲ, ಅಡಿಕೆಯಿಂದ ಕ್ಯಾನ್ಸರ್ ನಿವಾರಕ ಔಷಧಿಗಳನ್ನು ತಯಾರಿಸಲು ಸಾಧ್ಯವಿದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅಲ್ಲದೆ ಅಡಿಕೆಯಿಂದ ತಯಾರಿಸಿದ ಸಾಬೂನು, ವೈನ್,ಬಣ್ಣ, ಸಿರಪ್, ಗಾಜು ಮೊದಲಾದ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಅಡಿಕೆ ಗಿಡದ ಹಾಳೆಯಿಂದ ತಯಾರಿಸುವ ಬಟ್ಟಲು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿದೆ. ಈಗ ಸ್ನಾನದ ಸಾಬೂನಿಗೆ ಪೇಟೆಂಟ್ ದೊರೆತಿರುವುದು ಮತ್ತೊಂದು ಆಶಾದಾಯಕ ಬೆಳವಣಿಗೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಕೆದಿಲದಲ್ಲಿರುವ ಹಾರ್ದಿಕ್ ಹರ್ಬಲ್ಸ್, ಸತ್ವಮ್ ಬ್ರಾಂಡ್ ನ ಮೂಲಕ ಸತ್ವಮ್ ಕೋಕೋರೇಕಾ-ಹರ್ಬಲ್ ಬಾತಿಂಗ್ ಸೋಪ್ ತಯಾರಿಸಲಾಗುತ್ತದೆ. 2021ರ ನವಂಬರ್ ನಲ್ಲಿ ಪೇಟೆಂಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕ್ರಿಯೆಯು ಅನೇಕ ಹಂತಗಳನ್ನು ದಾಟಿ ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರದ ಅನುಮೋದನೆಯನ್ನು ಪಡೆದಿದೆ. ಕೇಂದ್ರ ಸರ್ಕಾರದಿಂದ ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಪೇಟೆಂಟ್ ಪಡೆದುಕೊಂಡಿದೆ. ಇದರೊಂದಿಗೆ ಈ ವಿಶೇಷ ಉತ್ಪನ್ನದ ಹಕ್ಕು ಸ್ವಾಮಿಯವನ್ನು ಮುಂದಿನ 20 ವರ್ಷಗಳಿಗೆ ಹಾರ್ದಿಕ ಹರ್ಬಲ್ಸ್ ಕಾಯ್ದಿರಿಸಿಕೊಂಡಿದೆ.
ಅಡಿಕೆ ಹಣ್ಣಿನ ಸಿಪ್ಪೆಯ ರಸ, ತೆಂಗಿನ ಎಣ್ಣೆ, ಅಲೋವೆರಾ, ಸಾಗುವಾನಿ ಎಲೆ, ಅರಶಿನ ಎಣ್ಣೆ, ಕೊತ್ತಂಬರಿ ಮತ್ತು ಲಾವಂಚದಂತಹ ಪ್ರಬಲ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಈ ಸಾಬೂನು ತ್ವಚೆಯ ರಕ್ಷಣೆ ಮಾಡಲಿದೆ. ತ್ವಚೆ ಬಲಪಡಿಸಿ, ಸುಕ್ಕುಗಳನ್ನು ಕಡಿಮೆ ಮಾಡುವ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸಲಿದೆ. ಇದು ಚರ್ಮದಲ್ಲಿ ಬರುವಂತಹ ವೈಟ್ ಪ್ಯಾಚ್ ಅಥವಾ ಬಿಳಿ ಮಚ್ಚೆ ಅಥವಾ ಸಿಬ್ಬ ನಿವಾರಣೆಗೆ ಸಹಾಯ ಮಾಡುತ್ತದೆ. ತುರಿಕೆ ನಿವಾರಿಸಿ, ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ. ಈ ಉತ್ಪನ್ನವು ಚರ್ಮದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ ಸುಸ್ಥಿರತೆ ಕಾಯ್ದುಕೊಳ್ಳಲು ನೆರವಾಗುತ್ತದೆ.
ಸ್ಥಳೀಯ ಮೂಲದ ನೈಸರ್ಗಿಕ ಕೃಷಿ, ಔಷಧೀಯ ಪದಾರ್ಥಗಳ ಉತ್ಪಾದನೆ ಹಾಗೂ ಬಳಕೆಯನ್ನು ಪ್ರೋತ್ಸಾಹಿಸುವ ಜೊತೆಗೆ ಪೇಟೆಂಟ್ ನಿಂದ ವೈಜ್ಞಾನಿಕವಾಗಿ ಔಷಧೀಯ ಗುಣಗಳು ಸಾಬೀತಾಗಿದೆ. ಇದರಿಂದ ಅಡಕೆ ಕೃಷಿಯ ಮೌಲ್ಯವರ್ತನೆ ಹಾಗೂ ಅಡಿಕೆಯಲ್ಲಿರುವ ಔಷಧೀಯ ಗುಣಗಳನ್ನು ಪ್ರಚುರಪಡಿಸಿದಂತಾಗಿದೆ.
ಕರಾವಳಿ ಮತ್ತು ಮಲೆನಾಡಿಗೆ ಸೀಮಿತವಾಗಿರುವ ಅಡಿಕೆ ಬೆಲೆ ಇತ್ತೀಚಿನ ದಿನಗಳಲ್ಲಿ ಬಯಲುಸೀಮೆಗೂ ವಿಸ್ತರಿಸಿದೆ. ಹೀಗಾಗಿ ಅಡಿಕೆ ಬೆಳೆಯೂ ಈಗ ಕರ್ನಾಟಕದ ಬಹುಪಾಲು ಪ್ರದೇಶ ವ್ಯಾಪಿಸಿದೆ. ಅಡಿಕೆಯ ಮೇಲಿನ ಅಪವಾದವನ್ನು ತೊಡೆದು ಹಾಕುವ ನೀತಿನಲ್ಲಿ ಅಡಿಕೆಯಿಂದ ಹೊಸ ಹೊಸ ಉತ್ಪನ್ನಗಳನ್ನು ತಯಾರಿಸುವ ಆವಿಷ್ಕಾರಗಳು ಇನ್ನೂ ನಡೆಯಬೇಕಿದೆ.