ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ನೆರವು ಘೋಷಿಸಿದ್ದ ಅಜಿಂ ಪ್ರೇಮ್ ಜಿ ಫೌಂಡೇಶನ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.. ಅನುದಾನ ವರ್ಗಾವಣೆಗೆ ಶಿಕ್ಷಣ ಇಲಾಖೆ ಬರೆದ ಪತ್ರಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಜಿಲ್ಲಾ ಹಂತದಲ್ಲಿ 31 ಮತ್ತು ಬ್ಲಾಕ್ ಹಂತದಲ್ಲಿ 176 ಬ್ಯಾಂಕ್ ಖಾತೆಗಳನ್ನು ಆಯುಕ್ತರು ಶಿಕ್ಷಣ ಇಲಾಖೆ ಬೆಂಗಳೂರು ಇವರ ಹೆಸರಿನಲ್ಲಿ ತೆರೆಯಲು ಅನುಮತಿ ನೀಡಿದೆ.
ಕಾರ್ಯಕ್ರಮ ಅನುಷ್ಠಾನಕ್ಕೆ ತೆರೆಯಲಾಗುವ ಬ್ಯಾಂಕ್ ಖಾತೆಗಳಿಗೆ ಇತರೆ ಯಾವುದೇ ಕಾರ್ಯಕ್ರಮಗಳ ಮೊತ್ತ ಜಮೆ ಮಾಡತಕ್ಕದ್ದಲ್ಲ. ವಾರಕ್ಕೊಮ್ಮೆ ಜಿಲ್ಲೆಗಳು ಮತ್ತು ಬ್ಲಾಕ್ಗಳಿಗೆ ಮತ್ತು ಶಾಲೆಗಳಿಗೆ ಬಿಡುಗಡೆಯಾದ ಮೊತ್ತದ ವಿವರ ಮತ್ತು ಮೊತ್ತದ ಬಳಕೆಯ ವಿವರಗಳು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಒದಗಿಸಬೇಕು. ಅನುದಾನವು ದುರ್ಬಳಕೆಯಾಗದಂತೆ ಆಯುಕ್ತರು, ಮೇಲ್ವಿಚಾರಣೆ ನಡೆಸತಕ್ಕದ್ದು ಎಂದು ಸರ್ಕಾರ ಶರತ್ತು ಹಾಕಿದೆ.
ರಾಜ್ಯ ಸರ್ಕಾರ ವಾರದಲ್ಲಿ ಎರಡು ದಿನ ಈಗಾಗಲೇ ಮೊಟ್ಟೆ ನೀಡುತ್ತಿದ್ದು, ಉಳಿದ ನಾಲ್ಕು ದಿನ ಮೊಟ್ಟೆ ನೀಡಲು ಮುಂದೆ ಬಂದ ಅಜಿಂ ಪ್ರೇಮ್ ಜಿ ಫೌಂಡೇಶನ್ 55 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಲು ಸುಮಾರು 1500 ಕೋಟಿ ರೂಪಾಯಿ ನೆರವು ನೀಡಲು ಮುಂದೆ ಬಂದಿದೆ. ಹೀಗಾಗಿ ಇನ್ನು ಮುಂದೆ ಮಕ್ಕಳಿಗೆ ವಾರದ ಆರೂ ದಿನವೂ ಮೊಟ್ಟೆ ಸಿಗಲಿದೆ.