ಹಲವು ವರ್ಷಗಳ ಹಿಂದೆ ಅನಕ್ಷರಸ್ಥ ಜನರಿಗೆ ಅಕ್ಷರ ಕಲಿಸುವ ರಾತ್ರಿ ಶಿಕ್ಷಣವೊಂದು ಜಾರಿಯಲ್ಲಿತ್ತು. ದೀಪದ ಬೆಳಕಿನಡಿಯಲ್ಲಿ ಕುಳಿತು ಆಸಕ್ತರು ಅಕ್ಷರಸ್ಥರಿಂದ ವಿದ್ಯಾಭ್ಯಾಸ ಕಲಿಯುತ್ತಿದ್ದರು. ಇದರಿಂದಾಗಿ ಹೆಬ್ಬೆಟ್ಟು ಒತ್ತುತ್ತಿದ್ದ ಅವೆಷ್ಟೋ ಜನ ಸಹಿ ಹಾಕಲು ಆರಂಭಿಸಿದ್ದರು. ಇದರಿಂದಾಗಿ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿತ್ತು.
ಸಾಕ್ಷರತಾ ಗಣತಿಯ ಸಮೀಕ್ಷೆಯು ಇತ್ತೀಚೆಗೆ ಸುಳ್ಳಾಗಿ ಮಾರ್ಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯು ಇಡೀ ರಾಜ್ಯದಲ್ಲೇ ಹೆಚ್ಚು ಸಾಕ್ಷರತೆ ಹೊಂದಿರುವ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸಾಕ್ಷರತಾ ಪ್ರಗತಿಗಾಗಿ ಸರ್ಕಾರವು ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದೆ. ಆದರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಗ್ರಾಮ ಪಂಚಾಯತ್ ಸದಸ್ಯರಲ್ಲಿ ಹಲವು ಜನ ಅನಕ್ಷರಸ್ಥರಿದ್ದಾರಂತೆ…!! ಸಹಿಯ ಬದಲು ಈಗಲೂ ಈ ಸದಸ್ಯರು ಹೆಬ್ಬೆಟ್ಟು ಒತ್ತುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ಏನಿದು ಸಾಕ್ಷರ ಸಮ್ಮಾನ್..?
ಸಾಕ್ಷರ ಸಮ್ಮಾನ್ ಎಂದರೆ ಇಂದಿಗೂ ಸಹಿ ಹಾಕಲು ಬಾರದ ಅನಕ್ಷರಸ್ಥ ಗ್ರಾಮ ಪಂಚಾಯತ್ ಸದಸ್ಯರನ್ನು ಸಾಕ್ಷರರನ್ನಾಗಿ ಮಾಡಲು ಆರಂಭಿಸಲಾಗುತ್ತಿರುವ ಹೊಸ ಸಾಕ್ಷರತಾ ಯೋಜನೆ.
1990ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಕ್ಷರತಾ ಆಂದೋಲನ ತ್ವರಿತವಾಗಿ ನಡೆದು ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ಹೆಚ್ಚು ಸಾಕ್ಷರ ಜನರಿರುವ ಜಿಲ್ಲೆಯಾಗಿ ಘೋಷಿಸಲ್ಪಟ್ಟಿತ್ತು. 2011ರ ಜನಗಣತಿ ಪ್ರಕಾರ ರಾಜ್ಯದ ಮೊದಲನೇ ಸಾಕ್ಷರ ಜಿಲ್ಲೆಯಾಗಿದ್ದು ಸಾಕ್ಷರರ ಪ್ರಮಾಣ ಶೇ.88ರಷ್ಟಿದೆ.
ಇದನ್ನೂ ಓದಿ: 1ನೇ ತರಗತಿ ಸೇರಲು ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ
ಅನಕ್ಷರಸ್ಥರ ಬಗ್ಗೆ ಮಾಹಿತಿ ತಿಳಿದದ್ದು ಹೇಗೆ?
ಸಾಕ್ಷರತಾ ಜಿಲ್ಲೆಯೆಂಬ ಹೆಮ್ಮೆಯ ಕಿರೀಟ ನೆಲಕ್ಕೆ ಬಿದ್ದಿದ್ದು ಹೇಗೆ ಗೊತ್ತಾ..? ಗ್ರಾಮ ಪಂಚಾಯತ್ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಮೈಸೂರಿನ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಜನಪ್ರತಿನಿಧಿಗಳ ತರಬೇತಿ ಅಅಅಅಅಅವೇಳೆ ವಿವಿಧ ಜಿಲ್ಲೆಗಳ ಸದಸ್ಯರ ಚಟುವಟಿಕೆಯನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ(ಎಸ್.ಐ.ಆರ್.ಡಿ)ಯವರು ದಾಖಲಿಸಿಕೊಂಡಿದ್ದು, ಆಗ ಸಹಿ ಹಾಕುವ ಬದಲು ಬೆರಳಚ್ಚು ಅಂದರೆ ಹೆಬ್ಬೆಟ್ಟು ಒತ್ತಿರುವುದು ಗೊತ್ತಾಗಿದೆ. ಆದ್ದರಿಂದ ಈ ಅನಕ್ಷರಸ್ಥ ಗ್ರಾಮ ಪಂಚಾಯತ್ ಸದಸ್ಯರಿಗೆ ಸಾಕ್ಷರತೆಯ ಪಾಠ ಕಲಿಸಲು ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 53 ಗ್ರಾಮ ಪಂಚಾಯತ್ ಗಳ 72 ಸದಸ್ಯರು ಹಾಗೂ ಉಡುಪಿ ಜಿಲ್ಲೆಯ 42 ಅನಕ್ಷರಸ್ಥ ಸದಸ್ಯರನ್ನು ಎಸ್.ಐ.ಆರ್.ಡಿ ಸಂಸ್ಥೆ ಗುರುತಿಸಿದೆ. ಇದರಲ್ಲಿ ಕೆಲವರು ಮತ್ತೆ ಅಕ್ಷರಾಭ್ಯಾಸ ಕಲಿತಿದ್ದು ಮಿಕ್ಕ ಸದಸ್ಯರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹಾಗೂ ಪುತ್ತೂರಿನಲ್ಲಿ ತರಬೇತಿಯನ್ನು ನಡೆಸಲಾಗುವುದು ಎಂದು ಜಿಲ್ಲಾ ಲೋಕ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ
ಕರ್ನಾಟಕದಾದ್ಯಂತ ಹಲವು ಗ್ರಾಮ ಪಂಚಾಯತ್ ಗಳಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದು ಬೆಳಗಾವಿ 727, ತುಮಕೂರು 328, ಚಿಕ್ಕಬಳ್ಳಾಪುರ 305, ರಾಮನಗರ 227, ಹಾಸನ 223 ಅನಕ್ಷರಸ್ಥ ಸದಸ್ಯರನ್ನು ಹೊಂದಿದೆ.
ಸಾಕ್ಷರ ಸಮ್ಮಾನ್ ಯೋಜನೆ ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದ ಲೋಕಶಿಕ್ಷಣಾಧಿಕಾರಿ ಲೋಕೇಶ್ ಅವರ ಪ್ರಕಾರ “ಈಚ್ ಒನ್, ಟೀಚ್ ಒನ್” ಎಂದರೆ ಪ್ರತಿಯೊಬ್ಬನೂ ಇನ್ನೊಬ್ಬನಿಗೆ ಕಲಿಸುವುದು ಎನ್ನುವ ನೆಲೆಯಲ್ಲಿ ಆಯಾ ಗ್ರಾಮ ಪಂಚಾಯತ್ ಸಿಬ್ಬಂದಿಗಳೇ ತಮ್ಮಲ್ಲಿನ ಅನಕ್ಷರಸ್ಥ ಜನಪ್ರತಿನಿಧಿಗಳಿಗೆ ಕಲಿಸುವ ಕಾರ್ಯಕ್ರಮ ಸಾಕ್ಷರತಾ ಸಮ್ಮಾನ್. ಇದಕ್ಕಾಗಿ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಹೇಳಿದ್ದಾರೆ.