ಇಡೀ ಜಗತ್ತಿನ ಪರಿಸರ ವ್ಯವಸ್ಥೆ ವೈವಿಧ್ಯಮಯವಾಗಿ ಕೂಡಿದ್ದು ಪ್ರತಿಯೊಂದು ಜೀವಿಯೂ ತನ್ನದೇ ಮಹತ್ವವನ್ನು ಹೊಂದಿದೆ. ಜೀವಸಂಕುಲದಲ್ಲಿ ನಾನಾ ಬಗೆಯ ಜೀವಿಗಳಿದ್ದು ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಇವೆಲ್ಲದರ ಪಾಲು ಬಹು ಮುಖ್ಯ. ಯಾವುದೇ ಒಂದು ಜೀವಿ ಇನ್ನೊಂದು ಜೀವಿಯನ್ನು ಆಹಾರವಾಗಿ ಸ್ವೀಕರಿಸದೇ ಹೋದರೆ ಅವುಗಳ ಸಂತತಿ ಪ್ರಕೃತಿಗೆ ಮಾರಕವೇ ಸರಿ. ಆದರೆ ಇಂದು ಅದೆಷ್ಟೋ ಜೀವ ಪ್ರಭೇದಗಳು ನಶಿಸಿ ಹೋದರೆ ಇನ್ನೂ ಕೆಲವು ಪ್ರಭೇದಗಳು ಅಳಿವಿನಂಚಿನಲ್ಲಿದೆ.
ಜೀವಶಾಸ್ತ್ರವನ್ನು ಆಳವಾಗಿ ಅಧ್ಯಯನ ನಡೆಸಿದರೆ ಉಭಯವಾಸಿ ಜೀವಿಗಳ ಪಟ್ಟಿ ಕಾಣ ಸಿಗುತ್ತದೆ. ಅಂದರೆ ನೀರಿನಲ್ಲೂ, ಭೂಮಿಯ ಮೇಲೂ ವಾಸಿಸಲ್ಪಡುವ ಜೀವಿಗಳಿವು. ಇವುಗಳನ್ನು ಪರಿಸರ ವ್ಯವಸ್ಥೆಯ ಜೈವಿಕ ಸೂಚಕಗಳೆಂದು ಹೇಳಲಾಗುತ್ತದೆ. ಯಾಕೆಂದರೆ ಪ್ರಕೃತಿಯಲ್ಲಾಗುವ ಪ್ರತಿಯೊಂದು ಬದಲಾವಣೆಗಳನ್ನು ಬಹುಬೇಗನೆ ಗ್ರಹಿಸುವ ಶಕ್ತಿ ಈ ಉಭಯಜೀವಿಗಳಿಗಿದೆ. ಹಾಗಾಗಿಯೇ ಇವುಗಳನ್ನು ‘ಅಪಾಯದ ಮುನ್ಸೂಚನೆಯ ಜೀವಿಗಳು’ ಎಂದೂ ಕರೆಯಲಾಗುತ್ತದೆ. ಈ ಉಭಯವಾಸಿಗಳಲ್ಲಿ ಅತ್ಯಂತ ಗಮನಾರ್ಹ ಜೀವಿಯೆಂದರೆ ಕಪ್ಪೆ ಅಥವಾ ಮಂಡೂಕ. ಈ ಕಪ್ಪೆಗಳು ಕೀಟ ನಿಯಂತ್ರಕಗಳಾಗಿದ್ದು ಪರಭಕ್ಷಕ ಜೀವಿಗಳ ಆಹಾರದ ಮೂಲವೂ ಹೌದು. ಈ ಕಪ್ಪೆಗಳಲ್ಲಿ ಹಲವಾರು ಪ್ರಭೇದಗಳಿದ್ದು “ಮಲೆನಾಡು ಮರ ಗಂತಿಕಪ್ಪೆ” ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತದೆ. ಜನ ಸಾಮಾನ್ಯರಲ್ಲಿ ಕಪ್ಪೆಯೂ ಸೇರಿ ಉಭಯವಾಸಿಗಳ ಸಂರಕ್ಷಣೆ ಹಾಗೂ ಮಹತ್ವದ ಅರಿವು ಮೂಡಿಸಲು ನಾನಾ ಬಗೆಯ ಪ್ರಯತ್ನಗಳಲ್ಲಿ ತೊಡಗಿಕೊಂಡಿರುವ ಪ್ರಕೃತಿ ವಿಜ್ಞಾನಿಗಳು ಈಗ ‘ರಾಜ್ಯ ಕಪ್ಪೆ’ ಎಂದು ಘೋಷಣೆ ಮಾಡುವಂತೆ ಸರ್ಕಾರದ ವನ್ಯ ಜೀವಿ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಕಪ್ಪೆ ಎಂದು ಘೋಷಿಸಲು ಕಾರಣವೇನು?
ನಮ್ಮ ಕರ್ನಾಟಕದಲ್ಲಿ ಪ್ರಸ್ತುತ ರಾಜ್ಯ ಪ್ರಾಣಿ, ಪಕ್ಷಿ, ಹೂವು, ಹಣ್ಣು, ಮರ, ಚಿಟ್ಟೆ ಎಂದು ಕೆಲವೊಂದನ್ನು ನಾಮ ನಿರ್ದೇಶನ ಮಾಡಲಾಗಿದೆ. ಇದರಿಂದ ಅವುಗಳ ಮಹತ್ವ, ಪ್ರಾಮುಖ್ಯತೆ ಹೆಚ್ಚಾಗಿದ್ದು, ಅವುಗಳ ಸಂರಕ್ಷಣೆಗೆ ಸರ್ಕಾರ ಹಾಗೂ ಜನತೆ ಕಾರ್ಯಪ್ರವೃತ್ತರಾಗಿದ್ದಾರೆ. ಅದೇ ರೀತಿ ‘ರಾಜ್ಯ ಕಪ್ಪೆ’ ಎಂದು ಗುರುತಿಸಿದರೆ ಆ ಸಣ್ಣ ಜೀವ ಪ್ರಭೇದದತ್ತ ಜನರ ಗಮನ ಹರಿದು ಅದರ ಸಂರಕ್ಷಣೆಯ ಕೆಲಸ ನಡೆಯುತ್ತದೆ. ಅಷ್ಟೇ ಅಲ್ಲದೆ ಅವುಗಳ ಬಗ್ಗೆ ಅಧ್ಯಯನ, ಸಂಶೋಧನೆಗಳೂ ಹೆಚ್ಚಾಗ ತೊಡಗುತ್ತದೆ. ಈ ಮೂಲಕ ಕಪ್ಪೆಯೂ ಸೇರಿ ಉಭಯವಾಸಿಗಳಿಗೆ ವಿಶೇಷ ಪ್ರಾಶಸ್ತ್ಯ ಸಿಗುವುದಲ್ಲದೆ ಅವುಗಳ ಸಂರಕ್ಷಣೆಯೂ ಆಗುತ್ತದೆ ಎಂಬುದು ವನ್ಯಜೀವಿ ಮಂಡಳಿಯ ಅಭಿಪ್ರಾಯ.
“ಮರ ಗಂತಿಕಪ್ಪೆಯ ವಿಶೇಷತೆಗಳೇನು?
ಸಾಮಾನ್ಯವಾಗಿ ಕಾಣಸಿಗುವ ಕಪ್ಪೆ ಹಾಗೂ ಗಂತಿಕಪ್ಪೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತದೆ. ಸಾಮಾನ್ಯ ಕಪ್ಪೆಯ ಚರ್ಮ ಲೋಲೆಯಾಗಿದ್ದು, ಹೆಚ್ಚಾಗಿ ನೀರಿನ ಪ್ರದೇಶಗಳಲ್ಲಿ ವಾಸಿಸುತ್ತವೆ. ನೆಲದ ಮೇಲೆ ಜೀವಿಸುವ ದಂತಿಕಪ್ಪೆಗಳ ಚರ್ಮ ಸ್ಯಾಂಡ್ ಪೇಪರ್ ತರಹ ಒರಟಾಗಿರುತ್ತದೆ. ಅಷ್ಟೇ ಅಲ್ಲದೆ ಈ ಕಪ್ಪೆಗಳ ಕಣ್ಣಿನ ಹಿಂಭಾಗದಲ್ಲಿ ವಿಷಕಾರಿ ಗ್ರಂಥಿಯಿದ್ದು, ಇದು ಸಾಮಾನ್ಯ ಕಪ್ಪೆಗಳಲ್ಲಿ ಇರುವುದಿಲ್ಲ. ಮಲೆನಾಡು ಪ್ರದೇಶದಲ್ಲಿ ಕಂಡು ಬರುವ ಈ ವಿಶಿಷ್ಟ ಪ್ರಭೇದಕ್ಕೆ ಗ್ರಂಥಿಯಿರುವುದರಿಂದ ಹಾಗೂ ಮರದಲ್ಲಿ ವಾಸಿಸುವುದರಿಂದ ಇದನ್ನು “ಮಲೆನಾಡು ಮೂರು ಗಂತಿಕಪ್ಪೆ” ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಪ್ಪೆಗಳು ಮಳೆಗಾಲದಲ್ಲಿ ಕೂಗಿದರೆ ಈ ಕಪ್ಪೆಗಳು ಮಳೆಗಾಲದ ಆರಂಭಕ್ಕೂ ಮುನ್ನವೇ ಕೂಗುತ್ತವೆ. 3.6 ರಿಂದ 3.8 ಸೆಂ.ಮೀವರೆಗೆ ಬೆಳೆಯುವ ಈ ಕಪ್ಪೆಗಳು ಜೂನ್ ಆರಂಭದ ವಾರಗಳಲ್ಲಿ ನೆಲಕ್ಕೆ ಬಂದು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುತ್ತವೆ.
ರಾಜ್ಯ ಕಪ್ಪೆಯಾಗಿ ಮರ ಗಂತಿಕಪ್ಪೆಯನ್ನೇ ಯಾಕೆ ಆಯ್ಕೆ ಮಾಡಲು ಸೂಚಿಸಲಾಗಿದೆ?
ಮಲೆನಾಡು ಮೂರು ಗಂತಿಕಪ್ಪೆಯನ್ನೇ ರಾಜ್ಯ ಕಪ್ಪೆಯನ್ನಾಗಿ ನಾಮ ನಿರ್ದೇಶನ ಮಾಡಲು ಕೆಲವೊಂದು ಪ್ರಮುಖ ಕಾರಣಗಳಿವೆ. ಸದ್ಯಕ್ಕೆ ಇವು ಮಲೆನಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವಸಾನದ ಅಂಚಿನಲ್ಲಿಲ್ಲ. ಜಿನಸ್ ಪಿಡೊಸ್ಟೈಬ್ ವರ್ಗಕ್ಕೆ ಸೇರಿದ ಏಕಮಾತ್ರ ಜೀವಿಯಿದಾಗಿದ್ದು 6.5 ರಿಂದ 7 ಕೋಟಿ ವರ್ಷಗಳ ಹಿಂದೆ ವಿಕಾಸಗೊಂಡಿದೆ ಎನ್ನಲಾಗಿದೆ. 1972ರ ಭಾರತೀಯ ವನ್ಯಜೀವಿ ಕಾಯ್ದೆಯ 2ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಂಡ ಏಕೈಕ ಗಂತಿಕಪ್ಪೆ ಇದಾಗಿದೆ. ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಗಂತಿಕಪ್ಪೆ ಜಾತಿಗಳಿಗೆ ಇದುವೇ ಆಧಾರ ಜೀವಿ. ಮುರಕಲ್ಲು ಪ್ರದೇಶ, ಪಶ್ಚಿಮ ಘಟ್ಟ, ಹರಿದ್ವರ್ಣ, ಮಿರಿಸ್ಟಿಕಾ ಜೌಗು ಕಾಡು ಹಾಗೂ ಇತರ ಸಂರಕ್ಷಿತ ವನ್ಯ ಪ್ರದೇಶಗಳು ಈ ಕಪ್ಪೆಗಳ ವಾಸಸ್ಥಳವಾಗಿದ್ದು, ಕಪ್ಪೆಗಳ ರಕ್ಷಣೆಯಿಂದ ಕಾಡುಗಳೂ ಉಳಿಯಲಿವೆ. ರಾಜ್ಯದಲ್ಲಿರುವ 115 ಉಭಯಜೀವಿಗಳಲ್ಲಿ ಮಲೆನಾಡು ಮರಗಂತಿ ಕಪ್ಪೆ ಹೊಂದಿರುವ ವೈಶಿಷ್ಟ್ಯತೆ ಮತ್ತೆ ಯಾವ ಉಭಯಜೀವಿಯೂ ಹೊಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಪ್ಪೆಗಳು ನೈಸರ್ಗಿಕ ಪರಂಪರೆಯ ಭಾಗವಾಗಿವೆ.
ಮಲೆನಾಡು ಮರಗಂತಿ ಕಪ್ಪೆಯನ್ನು ಗುರುತಿಸಿದವರಾರು?
1875ರಲ್ಲಿ ಮೊದಲ ಬಾರಿಗೆ ಬ್ರಿಟಿಷ್ ಪ್ರಕೃತಿ ವಿಜ್ಞಾನಿ ಗುಂಥರ್ ಎಂಬವರು ಮಲಬಾರ್ ಪ್ರದೇಶದಲ್ಲಿ ಪತ್ತೆ ಮಾಡಿ “ಪಿಡೊಸ್ಟೈಬ್ ಟ್ಯುಬರ್ಲೊಸಸ್” ಎಂಬ ವೈಜ್ಞಾನಿಕ ಹೆಸರಿಟ್ಟರು. 1980ರಲ್ಲಿ ಮತ್ತೆ ಈ ಕಪ್ಪೆಯನ್ನು ಕೇರಳದ ಸೈಲೆಂಟ್ ವ್ಯಾಲಿ ಅಭಯಾರಣ್ಯದಲ್ಲಿ ಶೋಧಿಸಲಾಗಿತ್ತು. ಆದರೆ 2004ರಲ್ಲಿ ಶಿವಮೊಗ್ಗದ ಹೊಸನಗರ ತಾಲೂಕಿನ ಜಕ್ಕನಗದ್ದೆಯಲ್ಲಿ ವಿಜ್ಞಾನಿ ಡಾ| ಗುರುರಾಜ ಕೆ ವಿ ಈ ಕಪ್ಪೆಯನ್ನು ನೋಡಿ, ಅದರ ಧ್ವನಿ ರೆಕಾರ್ಡ್ ಮಾಡಿದ್ದರು.
ಮಲೆನಾಡು ಮರಗಂತಿ ಕಪ್ಪೆಯನ್ನು ರಾಜ್ಯ ಕಪ್ಪೆಯಾಗಿ ಘೋಷಿಸಲು ಮನವಿ ಮಾಡಿ ಇದು ನಾಲ್ಕನೇ ಬಾರಿ ಅರ್ಜಿ ಸಲ್ಲಿಸಿದ್ದಾಗಿದೆ. ವಿಶ್ವದಲ್ಲೇ ಅಮೇರಿಕಾದ ಟೆಕ್ಸಾಸ್ ಹಾಗೂ ನ್ಯೂ ಮೆಕ್ಸಿಕೊ ರಾಜ್ಯಗಳು ಮಾತ್ರ ‘ರಾಜ್ಯ ಕಪ್ಪೆ’ಯನ್ನು ಘೋಷಿಸಿದೆ. ಕೇರಳ ರಾಜ್ಯದಲ್ಲೂ ಅಲ್ಲಿನ ಪರಿಸರ ವಿಜ್ಞಾನಿಗಳು ‘ಮಹಾಬಲಿ ಕಪ್ಪೆ’ ಪ್ರಭೇದವನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಸಲು ಪ್ರಸ್ತಾಪಿಸಿದ್ದು, ಅದು ಪರಿಶೀಲನೆ ಹಂತದಲ್ಲಿದೆ. ಈ ವಿಷಯದಲ್ಲಿ ಕರ್ನಾಟಕ ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಂಡರೆ ರಾಜ್ಯ ಕಪ್ಪೆ ಎಂದು ನಾಮ ನಿರ್ದೇಶಿಸಿದ ಭಾರತದ ಮೊದಲ ಹಾಗೂ ವಿಶ್ವದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.