ದೇಶದ ಎರಡನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (ಎಸ್.ಎಸ್.ಬಿ.ಎನ್) ಐಎನ್ಎಸ್ ಅರಿಘಾತ್ ಅಥವಾ ಎಸ್-3 ಅನ್ನು ಅಧಿಕೃತವಾಗಿ ವಿಶಾಖಪಟ್ಟಣಂ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶ ರಕ್ಷಣೆಗಾಗಿ ನಿಯೋಜನೆಗೊಳಿಸಿದ್ದಾರೆ. ಇದರಿಂದಾಗಿ ಭಾರತೀಯ ನೌಕಾಪಡೆಗೆ ಆನೆಬಲ ಸಿಕ್ಕಂತಾಗಿದೆ. ಐಎನ್ಎಸ್ ಅರಿಘಾತ್ ಲೋಕಾರ್ಪಣೆಯೊಂದಿಗೆ, ಭಾರತ ಈಗ ಎರಡು ಕಾರ್ಯಾಚರಣೆಯ ಎಸ್‌ಎಸ್‌ಬಿಎನ್ ಗಳನ್ನು ಹೊಂದಿದೆ. ಈ ಮಾದರಿಯ ಮೊದಲ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಅನ್ನು ಆಗಸ್ಟ್ 2016ರಲ್ಲಿ ಸೇವೆಗೆ ನಿಯೋಜಿಸಲಾಗಿತ್ತು ಯ. ಇದರ ವಿಶೇಷತೆಗಳು, ಭಾರತೀಯ ನೌಕಾಪಡೆಗೆ ಯಾವ ರೀತಿ ಗೇಮ್ ಚೇಂಜರ್ ಆಗಿ ಇದು ಕರ್ತವ್ಯ ನಿರ್ವಹಿಸಬಹುದು ಎಂಬುದರ ಬಗ್ಗೆ ಕಿರು ಮಾಹಿತಿ ಇಲ್ಲಿದೆ.
ಏನಿದು ಐಎನ್ಎಸ್ ಅರಿಘಾತ್?
ಸಂಸ್ಕೃತ ಭಾಷೆಯಲ್ಲಿ ಅರಿಘಾತ್ ಎಂದರೆ ಶತ್ರುಗಳನ್ನು ನಾಶಪಡಿಸುವುದು ಎಂದರ್ಥ. ಇದು ಅರಿಹಂತ್ ವರ್ಗದ ಎರಡನೇ ಜಲಾಂತರ್ಗಾಮಿಯಾಗಿದ್ದು, 2017ರಿಂದಲೇ ವಿಶಾಖಪಟ್ಟಣಂ ನ ಹಡಗು ನಿರ್ಮಾಣ ಕೇಂದ್ರದಲ್ಲಿ (ಎಸ್.ಬಿ.ಸಿ) ನಿರ್ಮಾಣ ಹಂತದಲ್ಲಿತ್ತು.
ಅರಿಘಾತ್ ನೌಕೆಯ ವಿಷೇಶತೆಗಳೇನು?
ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳಿಗೆ ಹೋಲಿಸಿದರೆ, ಐಎನ್ಎಸ್ ಅರಿಘಾತ್ 83 ಮೆಗಾ ವ್ಯಾಟ್ ಒತ್ತಡದ ಲಘು-ನೀರಿನ ರಿಯಾಕ್ಟರ್ ಗಳಿಂದ ಚಾಲಿತವಾಗಿದ್ದು, ತಿಂಗಳುಗಳವರೆಗೆ ನೀರಿನಾಳದಲ್ಲಿ ಇರುವ ಸಾಮರ್ಥ್ಯವಿದೆ. ಜಲಾಂತರ್ಗಾಮಿ ನೌಕೆಯ ತೂಕ 6,000 ಟನ್ಗಳಾದರೆ ಉದ್ದ 112 ಮೀಟರ್. ಐಎನ್ಎಸ್ ಅರಿಘಾತ್ ನೀರಿನ ಮೇಲ್ಮೈಯಲ್ಲಿ 12-15 ನಾಟ್ (ಗಂಟೆಗೆ 22 ರಿಂದ 28 ಕಿಲೋಮೀಟರ್) ಕನಿಷ್ಠ ವೇಗವನ್ನು ತಲುಪಬಹುದು. ಮತ್ತು ನೀರಿನಾಳದಲ್ಲಿ 24 ನಾಟ್ (ಗಂಟೆಗೆ 44 ಕಿಲೋಮೀಟರ್) ವೇಗದಲ್ಲಿ ಚಲಿಸಬಲ್ಲದು. ಡಬಲ್ ಹಲ್, ಬ್ಯಾಲಸ್ಟ್ ಟ್ಯಾಂಕ್ಗಳು, ಎರಡು ಸ್ಟ್ಯಾಂಡ್ ಬೈ ಸಹಾಯಕ ಎಂಜಿನ್ ಗಳು ಮತ್ತು ತುರ್ತು ಶಕ್ತಿ ಮತ್ತು ಚಲನಶೀಲತೆಗಾಗಿ ಪೂರಕ ಥ್ರಸ್ಟರನ್ನು ಸಹ ಹೊಂದಿದೆ.
ಗೇಮ್ ಚೇಂಜರ್ ಎಂದೇ ಕರೆಯಲ್ಪಡುವ ಅರಿಘಾತ್
ಸ್ಟೆಲ್ತ್ ಸಾಮರ್ಥ್ಯಗಳಿಂದಾಗಿ, ಐಎನ್ಎಸ್ ಅರಿಘಾತ್ ಅನ್ನೋ ಗೇಮ್ ಚೇಂಜರ್ ಎಂದು ಅನೇಕ ತಜ್ಞರು ಅಭಿಪ್ರಾಯಪಡುತ್ತಾರೆ. ಸುಧಾರಿತ ಸೋನಾರ್ ವ್ಯವಸ್ಥೆಗಳು, ಶಾಂತ ಪ್ರೊಪಲ್ಷನ್ ಮತ್ತು ಅತ್ಯಾಧುನಿಕ ಸ್ಟೆಲ್ತ್ ತಂತ್ರಜ್ಞಾನವನ್ನು ಹೊಂದಿದ ಐಎನ್ಎಸ್ ಅರಿಘಾತ್, ಯಾವುದೇ ಅಪಾಯಕ್ಕೆ ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸಬಲ್ಲದು. ಇದು ಆಧುನಿಕ ನೌಕಾ ಕಾರ್ಯಾಚರಣೆಗಳ ಪ್ರಮುಖ ಅಂಶವಾದ ನಿಖರತೆ ಮತ್ತು ಗೌಪ್ಯತೆಯೊಂದಿಗೆ ತನ್ನ ಕಾರ್ಯಾಚರಣೆಗಳನ್ನು ನಿರ್ವಹಿಸಬಲ್ಲದು.
ಐಎನ್ಎಸ್ ಅರಿಘಾತ್ ನಾಲ್ಕು ಪರಮಾಣು ಸಾಮರ್ಥ್ಯದ -4, ಸುಮಾರು 3,500 ಕಿಲೋ ಮೀಟರ್ ವ್ಯಾಪ್ತಿಯ ಎಸ್.ಎಲ್.ಬಿ.ಎಂ ಗಳನ್ನು (ಜಲಾಂತರ್ಗಾಮಿ ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಗಳು) ಅಥವಾ ಸುಮಾರು 750 ಕಿಲೋ ಮೀಟರ್ ವ್ಯಾಪ್ತಿಯ 12 ಕೆ-15 ಎಸ್.ಎಲ್.ಬಿ.ಎಂ ಗಳನ್ನು ಹೊಂದಿರುತ್ತದೆ. ಇದಕ್ಕೆ ಪರಮಾಣು ಸಿಡಿತಲೆಗಳಿರುವ ಕೆ-15 ಕ್ಷಿಪಣಿಗಳನ್ನು ಅಳವಡಿಸಬಹುದು. ಇದರ ದೋಣಿಯು ಹೆಚ್ಚು ಸಮರ್ಥವಾಗಿದೆ ಮತ್ತು ರಹಸ್ಯವಾಗಿದೆ.
ಐಎನ್ಎಸ್ ಅರಿಘಾತ್ ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ವಿಶೇಷ ಕಾರ್ಯಾಚರಣೆಗಳಿಗೂ ಉಪಯುಕ್ತವಾಗಿದೆ. ಇದು ಭಾರತದ ಕಡಲ ಕ್ಷೇತ್ರವನ್ನು ಅರಿಯುವ ಜೊತೆಗೆ ಹೊಸ ಬೆದರಿಕೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಆ ಮೂಲಕ ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಗೆ ಕೊಡುಗೆ ನೀಡುತ್ತದೆ.
ಐಎನ್ಎಸ್ ಅರಿಘಾತ್ ನೊಂದಿಗೆ, ಭಾರತ ಇಂಡೋ-ಪೆಸಿಫಿಕ್ ದೇಶದಲ್ಲಿ ಎರಡು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. ಐ.ಎನ್.ಎಸ್ ಅರಿಘಾತ್ ಬೃಹತ್ ಕಾರ್ಯತಂತ್ರಕ್ಕೆ ಸಹಾಯ ಮಾಡಲಿದೆ. ಈ ಪ್ರದೇಶದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವ ಯಾವುದೇ ನೌಕಾಪಡೆಗೆ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸಲಿದೆ ಎಂದು ತಜ್ಞರು ಹೇಳುತ್ತಾರೆ. ಚೀನಾ ಕಾನೂನುಬಾಹಿರವಾಗಿ ಕಡಲಿನ ಮೇಲೆ ತನ್ನ ಹಕ್ಕು ಸ್ಥಾಪಿಸಲು ಹೊರಟಿರುವ ಹಿನ್ನೆಲೆಯಲ್ಲಿ ಭಾರತದ ಬಲವರ್ಧನೆ ನಿರ್ಣಾಯಕವಾಗಿದೆ ಎಂಬುದು ಎಲ್ಲರ ಅಭಿಪ್ರಾಯ.
ಎಲೈಟ್ ಕ್ಲಬ್ ಗೆ ಭಾರತ
ಭಾರತವು ಈಗ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರುವ ಕೆಲವೇ ದೇಶಗಳ ಸಾಲಿಗೆ ಸೇರಿದೆ. ಪ್ರಸ್ತುತ, ಕೇವಲ ಆರು ದೇಶಗಳು ಯುಎಸ್, ರಷ್ಯಾ, ಯುಕೆ, ಫ್ರಾನ್ಸ್, ಚೀನಾ ಮತ್ತು ಭಾರತ ಈ ಎಲೈಟ್ ಕ್ಲಬ್ ನ ಭಾಗವಾಗಿದೆ, ಇದಲ್ಲದೆ ಭೂಮಿ, ವಾಯು ಮತ್ತು ನೀರಿನೊಳಗೆ ಪರಮಾಣು ಶಸ್ತ್ರಾಸ್ತ್ರವನ್ನು ಉಡಾಯಿಸುವ ಸಾಮರ್ಥ್ಯ ಹೊಂದಿರುವ ದೇಶಗಳ ಸಾಲಿಗೆ ಭಾರತವೂ ಸೇರಿದೆ. ಅಮೆರಿಕ, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಮಾತ್ರ ಈ ಸಾಮರ್ಥ್ಯವನ್ನು ಹೊಂದಿದೆ.
ರಕ್ಷಣಾ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಭಾರತದ ಜಲಾಂತರ್ಗಾಮಿ ಯೋಜನೆ
ಐಎನ್ಎಸ್ ಅರಿಘಾತ್ ಭಾರತದ ಅರಿಹಂತ್ ಜಲಾಂತರ್ಗಾಮಿ ಯೋಜನೆಯ ಭಾಗವಾಗಿದ್ದು, ಇದನ್ನು 900 ಶತಕೋಟಿ ರೂಪಾಯಿ (12 ಶತಕೋಟಿ ಡಾಲರ್) ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತ ದೊಡ್ಡ ಗಾತ್ರದೊಂದಿಗೆ, ಏಳು ಸಾವಿರ ಟನ್ ತೂಕದ ಇನ್ನೂ ಎರಡು ಎಸ್.ಎಸ್.ಬಿ.ಎನ್ ಗಳನ್ನು ಹೊಂದುವ ಯೋಚನೆಯಲ್ಲಿದೆ. ಮೂಲಗಳ ಪ್ರಕಾರ, ಮೂರನೆಯ, ಐಎನ್ಎಸ್ ಅರಿದಾಮನ್ ಅಥವಾ ಎಸ್4 ಅನ್ನು ಮುಂದಿನ ವರ್ಷ ನಿಯೋಜಿಸಲಾಗುವುದು. ಸ್ವಲ್ಪ ಸಮಯದ ನಂತರ ಎಸ್-4 ಎಂಬ ಕೋಡ್ ವರ್ಡ್ ಹೊಂದಿರುವ ನಾಲ್ಕನೇ ಎಸ್.ಎಸ್.ಬಿ.ಎನ್ ಅನ್ನು ನಿಯೋಜಿಸಲಾಗುತ್ತದೆ. ವರದಿಯ ಪ್ರಕಾರ, ಇವೆರಡೂ ನಾಲ್ಕು ಕ್ಷಿಪಣಿ ಕೊಳವೆಗಳ ಬದಲಿಗೆ ಎಂಟು ಕ್ಷಿಪಣಿ ಕೊಳವೆಗಳನ್ನು ಹೊಂದಿರುತ್ತವೆ.
”ಸಮುದ್ರವನ್ನು ನಿಯಂತ್ರಿಸುವವನು ರಾಷ್ಟ್ರಗಳ ಹಣೆಬರಹವನ್ನು ನಿಯಂತ್ರಿಸುತ್ತಾನೆ” ಎಂಬ ಮಾತಿನಂತೆ, ಅರಿಘಾತ್ ರಕ್ಷಣಾ ನೌಕೆಯು ಭಾರತದ ಮುಂದಿನ ಪೀಳಿಗೆಗೆ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವ ಸಾಗರದ ಮೇಲಿನ ಕಾವಲುಗಾರನಾಗಿರಲಿ ಎಂಬುದೇ ಎಲ್ಲರ ಆಶಯ.